ಲಂಡನ್ : ಇಡೀ ಕರುನಾಡೆ ಹೆಮ್ಮೆ ಪಡುವಂತಹ ಒಂದು ಸಂತಸದ ಸುದ್ದಿ ಹೊರಬಿದ್ದಿದೆ. ಇದುವರೆಗೂ ಬೂಕರ್ ಪ್ರಶಸ್ತಿ ಅಂದರೆ ಕೇವಲ ಪಾಶ್ಚಿಮಾತ್ಯ ಸಾಹಿತ್ಯಕ್ಕೆ ಅಷ್ಟೆ ಸೀಮಿತ ಅಂದುಕೊಂಡಿದ್ವಿ. ಆದರೆ ಇಂತಹ ಬೂಕರ್ ಪ್ರಶಸ್ತಿಯನ್ನ ನಮ್ಮ ಕನ್ನಡ ಬರಹ ಪಡೆದುಕೊಂಡಿದ್ದು, ಕರ್ನಾಟಕ ಮಾತ್ರವಲ್ಲದೆ ಇಡೀ ದೇಶವೇ ಹೆಮ್ಮೆಯಿಂದ ಬೀಗುತ್ತಿದೆ. ಕನ್ನಡದ ಪ್ರಸಿದ್ಧ ಲೇಖಕಿ ಬಾನು ಮುಷ್ತಾಕ್ ಅವರು ವಿಶ್ವದ ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ರಾಜ್ಯ ಮತ್ತು ದೇಶದ ಕೀರ್ತಿಯನ್ನು ತಂದಿದ್ದಾರೆ.
ಕನ್ನಡದ ಪ್ರಸಿದ್ಧ ಲೇಖಕಿ ಬಾನು ಮುಷ್ತಾಕ್ ಅವರಿಗೆ ಪ್ರತಿಷ್ಟಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ. ಬಾನು ಅವರು ಬರೆದಿದ್ದ ಹಸೀನಾ ಮತ್ತು ಇತರ ಕತೆಗಳು ಕೃತಿಯನ್ನು ದೀಪಾ ಭಸ್ತಿ ಅವರು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿದ್ದರು. ಈ ಕೃತಿಯು ಬೂಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಗೆ ಆಯ್ಕೆಯಾಗಿತ್ತು. ಬೂಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ನಲ್ಲಿದ್ದ ಒಟ್ಟು 6 ಕೃತಿಗಳಲ್ಲಿ ಅಂತಿಮವಾಗಿ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರ ಕೃತಿ ಪ್ರಶಸ್ತಿಗೆ ಭಾಜನವಾಗಿದೆ.
ಲಂಡನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಲೇಖಕಿ ಭಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಭಸ್ತಿ ಅವರು ಇಬ್ಬರು ಪರಸ್ಪರ ಅಪ್ಪಿಕೊಂಡು ಹರ್ಷ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯಕ್ಕೆ ದೊರೆತ ಮೊದಲ ಬೂಕರ್ ಪ್ರಶಸ್ತಿ ಇದಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯಕ್ಕೆ ಮನ್ನಣೆ ಸಿಕ್ಕಂತಾಗಿದೆ. ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿಯು 50 ಸಾವಿರ ಪೌಂಡ್ ನಗದು ಬಹುಮಾನ ಒಳಗೊಂಡಿದೆ. ಬಾನು ಮುಷ್ತಾಕ್ ಅವರ ಈ ಕೃತಿಯಲ್ಲಿ ಮುಸ್ಮಿಂ ಸಮುದಾಯದ ಬಾಲಕಿಯರ ಮತ್ತು ಹೆಣ್ಣು ಮಕ್ಕಳ ದೈನಂದಿನ ಜೀವನವನ್ನು ಬರೆಯಲಾಗಿದೆ.
ಇನ್ನು ಕರ್ನಾಟಕದ ಬಾನು ಮುಷ್ತಾಕ್ ಲೇಖಕಿ, ಹೋರಾಟಗಾರ್ತಿ, ವಕೀಲರಾಗಿಯೂ ಗುರುತಿಸಿಕೊಂಡಿದ್ದಾರೆ. 1970-80ರಲ್ಲಿ ಮುಷ್ತಾಕ್ ಪ್ರಗತಿಪರ ಪ್ರತಿಭಟನೆಯ ಸಾಹಿತ್ಯದ ಬರವಣಿಗೆಯನ್ನು ಅಳವಡಿಸಿಕೊಂಡವರು. ಮುಷ್ತಾಕ್ ಇಲ್ಲಿಯವರೆಗೆ ಆರು ಸಣ್ಣ ಕಥಾ ಸಂಕಲನಗಳು, ಒಂದು ಕಾದಂಬರಿ, ಒಂದು ಪ್ರಬಂಧ ಸಂಗ್ರಹ ಮತ್ತು ಒಂದು ಕವನ ಸಂಕಲನ ಬರೆದಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಸದ ಶಶಿ ತರೂರ್, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಅವರು ಬಾನು ಮುಷ್ತಾಕ್ ಅವರ ಈ ಸಾಧನೆಯನ್ನು ಅಭಿನಂದಿಸಿದ್ದು, ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು. ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಸ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ. ಕನ್ನಡ ಭಾಷೆಯ ಮತ್ತು ಭಾರತೀಯ ಸಾಹಿತ್ಯದ ಜಾಗತಿಕ ಗುರುತಿಗೆ ಇದು ಮಹತ್ವದ ಹೆಜ್ಜೆ ಎಂದು ಹೇಳಿದ್ದಾರೆ .