ಮೈಸೂರು : ಮೈಸೂರಿನಲ್ಲಿ ಯುವತಿಯ ಶವ ಪತ್ತೆ | ರೇಪ್ & ಮರ್ಡರ್ ಶಂಕೆ

ಮೈಸೂರು : ಮೈಸೂರು ನಗರದ ಹೊರವಲಯದಲ್ಲಿರುವ ಕಾಲೇಜು ಪ್ರದೇಶದ ಬಳಿ ಯುವತಿಯೊಬ್ಬಳ ಶವ ಅನುಮಾನಾಸ್ಪದ ರೀತಿಯಲ್ಲಿ ಇಂದು ಪತ್ತೆಯಾಗಿದ್ದು, ಇದು ಅತ್ಯಾಚಾರ ನಡೆಸಿದ ನಂತರ ಕೊಲೆ ಮಾಡಿದ ಘಟನೆ ಎನ್ನುವ ಶಂಕೆಗೆ ಕಾರಣವಾಗಿದೆ.

ಮೃತ ಯುವತಿ ಕಳೆದ ಮೂರು ವರ್ಷಗಳಿಂದ ಮಕ್ಕಳ ಡೇ ಕೇರ್ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಆಕೆ “ಕೆ.ಆರ್. ಆಸ್ಪತ್ರೆಗೆ ಹೋಗಿ ಬರುತ್ತೇನೆ” ಎಂದು ಡೇ ಕೇರಿನಿಂದ ಹೊರಟಿದ್ದರು. ಆಸ್ಪತ್ರೆಯಿಂದ ವಾಪಸಾಗುವ ವೇಳೆಗೆ ತಂದೆಗೆ ಕರೆಮಾಡಿದ್ದ ಯುವತಿಗೆ, “ಮಳೆ ಬರುತ್ತಿದೆ, ಆಟೋದಲ್ಲಿ ಹೋಗು” ಎಂದು ತಂದೆ ಸಲಹೆ ನೀಡಿದ್ದರು. ಆದರೆ ಆಕೆ ಮನೆಗೆ ತಲುಪದೆ ನಾಪತ್ತೆಯಾಗಿದ್ದರು.

ಇನ್ನು ಇಂದು ಯುವತಿಯ ಶವ ಪತ್ತೆಯಾದ ಸಂದರ್ಭ ಪ್ಯಾಂಟ್ ಉಲ್ಟಾ ಧರಿಸಿರುವುದು ಸೇರಿದಂತೆ ಅನೇಕ ಅನುಮಾನಾಸ್ಪದ ಅಂಶಗಳು ಕಂಡುಬಂದಿವೆ. ಇನ್ನು ಮೃತಳ ಸೋದರ ಮಾವ ಪ್ರತಿಕ್ರಿಯೆ ನೀಡಿದ್ದು, “ಅವಳ ಮೇಲೆ ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಿರುವ ಲಕ್ಷಣಗಳು ಸ್ಪಷ್ಟವಾಗಿದೆ. ಬಡವರ ಹೆಣ್ಣು ಮಕ್ಕಳಿಗೆ ಸದಾ ಅನ್ಯಾಯವಾಗುತ್ತಿದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಡಿಸಿಪಿ ಮುತ್ತುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews