ತುಮಕೂರು:
ಕುಣಿಗಲ್ ಕೆರೆಗೆ ಐಟಿ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಾಸುವ ಮುನ್ನವೇ ತುಮಕೂರಿನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ತುಮಕೂರಿಗರು ಬೆಚ್ಚಿ ಬಿದ್ದಿದ್ದಾರೆ. ಹೌದು ತುಮಕೂರು ಅಮಾನಿಕೆರೆ ಕೋಡಿ ಬಳಿ ಇರೋ ಕೋಡಿ ಬಸವೇಶ್ವರ ದೇವಾಲಯದ ಹಿಂಭಾಗ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಸುಮಾರು 35 ಆಸು ಪಾಸಿನ ಮಹಿಳೆಯ ಶವ ಪತ್ತೆಯಾಗಿದ್ದು, ಮಹಿಳೆಯ ಗುರುತು ಇನ್ನು ಪತ್ತೆಯಾಗಿಲ್ಲ.
ಎರಡು ದಿನಗಳ ಹಿಂದೆಯಷ್ಟೇ ಅಪರಿಚಿತ ಮಹಿಳೆಯೋರ್ವಳು ತುಮಕೂರು ಅಮಾನಿಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಎರಡು ಮೂರು ದಿನಗಳ ಬಳಿಕ ಮಹಿಳೆಯ ಶವ ಕೆರೆ ಕೋಡಿ ಬಳಿ ತೇಲಿಕೊಂಡು ಬಂದಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ತುಮಕೂರು ನಗರ ಪೊಲೀಸರು ಭೇಟಿ ನೀಡಿ, ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಶವಗಾರಕ್ಕೆ ರವಾನಿಸಲಾಗಿದೆ. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರೋ ಪೊಲೀಸರು ಮಹಿಳೆಯ ಗುರುತಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇನ್ನು ಮಹಿಳೆ ಆತ್ಮಹತ್ಯೆ ಮಾಡಿಕೊಂಡಳಾ ಅಥವಾ ಯಾರಾದರೂ ಕೊಲೆ ಮಾಡಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತುಮಕೂರು ನಗರ ಪ್ರದೇಶದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿರೋದಕ್ಕೆ ನಗರ ನಿವಾಸಿಗಳು ಮಾತ್ರ ಬೆಚ್ಚಿ ಬಿದ್ದಿದ್ದಾರೆ.