ತುಮಕೂರು:
ಗ್ಯಾರಂಟಿ ಭಾಗ್ಯಗಳನ್ನು ಕೊಟ್ಟ ಕಾಂಗ್ರೆಸ್ ಸರ್ಕಾರ, ಎಡಗೈಯಿಂದ ಕೊಟ್ಟು ಬಲಗೈಯಲ್ಲಿ ಕಸಿದುಕೊಳ್ಳುವ ಕೆಲಸ ಮಾಡಿದೆ. ಒಂದೊಂದೇ ವಸ್ತುಗಳ ಬೆಲೆ ಏರಿಸಲು ಮುಂದಾಗಿದ್ದ ರಾಜ್ಯ ಸರ್ಕಾರ ಏಪ್ರಿಲ್ 1 ರಿಂದ ಹಾಲು, ಮೊಸರಿನ ಮೇಲೆ ಏಕಾಏಕಿ ನಾಲ್ಕು ರೂಪಾಯಿ ಹೆಚ್ಚಳ ಮಾಡಿದೆ. ಜೊತೆಗೆ ಕರೆಂಟ್, ಟೋಲ್, ಹೊಸ ವಾಹನ ಖರೀದಿಗಳ ಮೇಲೆ ದರ ಹೆಚ್ಚಳ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಇಂದು ರಾಜ್ಯಾದ್ಯಂತ ಬಿಜೆಪಿ ನಾಯಕರು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ತುಮಕೂರಿನಲ್ಲೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಡಿಸಿ ಕಚೇರಿ ಮುಂದೆ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ನೇತೃತ್ವದಲ್ಲಿ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆಯಲ್ಲಿ ನಗರ ಶಾಸಕ ಜಿ.ಬಿ ಜ್ಯೋತಿ ಗಣೇಶ್ ಮತ್ತು ಗ್ರಾಮಾಂತರ ಶಾಸಕ ಸುರೇಶ್ ಗೌಡ ಸೇರಿ ಹಲವು ಮುಖಂಡರು ಭಾಗಿಯಾಗಿದ್ದರು. ಕಾಂಗ್ರೆಸ್ ಬಂದಿದೆ ಬೆಲೆ ಏರಿಕೆ ಗ್ಯಾರಂಟಿ ತಂದಿದೆ, ಲೂಟಿ ಹೊಡೆದ ಕಾಂಗ್ರೆಸ್ ಗೆ ಧಿಕ್ಕಾರ, ಬೆಲೆ ಏರಿಕೆಯ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಯುತ್ತದೆ ಎಂಬಂತಹ ಘೋಷಣೆಗಳನ್ನು ಕೂಗಲಾರಂಭಿಸಿದರು. ಪ್ರತಿಭಟನೆಯಲ್ಲಿ ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡರು ಭಾಗಿಯಾಗಿದ್ದು, ನೂರಾರು ಕಾರ್ಯಕರ್ತರು ಪ್ರತಿಭಟನೆಗೆ ಬೆಂಬಲ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಜ್ಯೋತಿಗಣೇಶ್, ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವನ್ನು ಟೀಕಿಸಿದರು. ಅವರು ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರ ನೆತ್ತಿ ಮೇಲೆ ಹೊರೆ ತರುತ್ತಿದೆ. ಇಂಥಾ ಅಸಮರ್ಥ ಸರ್ಕಾರವೊಂದನ್ನು ಬದಲಿಸಬೇಕಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಏರಿಕೆ ಮಾಡಿದ್ದ ಬೆಲೆಯನ್ನು ಇಳಿಸದಿದ್ದರೆ ಬಿಜೆಪಿಯ ಹೋರಾಟ ಮುಂದುವರೆಸುವುದಾಗಿ ಶಾಸಕ ಸುರೇಶ್‌ಗೌಡ ಎಚ್ಚರಿಸಿದರು. ಬೆಲೆ ಏರಿಕೆಗೆ ತಕ್ಷಣ ತಡೆ ಹಾಕದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸರ್ಕಾರದ ಬೆಲೆ ಏರಿಕೆ ಧೋರಣೆ ವಿರುದ್ಧ ತುಮಕೂರಿನಲ್ಲಿ ಪ್ರತಿಭಟನೆ ಯಶಸ್ವಿಯಾಗಿದ್ದು ಡಿಸಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.