ತುಮಕೂರು:
ಮೊನ್ನೆಯಷ್ಟೇ ಮುಕ್ತಾಯಗೊಂಡ ಬಜೆಟ್ ಅಧಿವೇಶನದ ವೇಳೆ ಸದನದಲ್ಲಿ ಗದ್ದಲವೆಬ್ಬಸಿ, ಮಸೂದೆಯ ಪ್ರತೀಗಳನ್ನ ಹರಿದು ಸ್ಪೀಕರ್ ಮೇಲೆ ಎಸೆದಿದ್ದ ೧೮ ಬಿಜೆಪಿ ಶಾಸಕರನ್ನ ಅಮಾನತುಗೊಳಿಸಿರೋ ಪ್ರಕರಣ ಹಾಗೂ ಕಾಂಗ್ರೆಸ್ ಸರ್ಕಾರದ ಮೈನಾರಿಟಿ ತುಷ್ಠೀಕರಣವನ್ನ ವಿರೋಧಿಸಿ ಇಂದು ತುಮಕೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಮತ್ತು ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ನೇತೃತ್ವದಲ್ಲಿ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು. ತುಮಕೂರು ಡಿಸಿ ಕಚೇರಿ ಎದುರು ಜಮಾಯಿಸಿದ್ದ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಸರ್ಕಾರವು ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಒತ್ತನ್ನು ನೀಡಿದೆ. ಓಬಿಸಿ ಮತ್ತು ಇನ್ನುಳಿದ ವರ್ಗಗಳನ್ನು ಕಡೆಗಣಿಸುತ್ತಿದೆ. ಸರ್ಕಾರವು ನಿರ್ಮಿಸಿರುವ ಕಾಡುಗೊಲ್ಲರ ನಿಗಮ ಹಾಗೂ ಇನ್ನಿತರ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡದೆ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಕಿಡಿ ಕಾರಿದರು.
ನಾವೇನು ಮುಸ್ಲಿಂ ವಿರೋಧಿಗಳಲ್ಲ. ಆದ್ರೆ ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ವಿರೋಧಿಸ್ತಿದ್ದು, ಅಲ್ಪಸಂಖ್ಯಾತರಿಗೆ ನೀಡುವಂತೆ ಎಲ್ಲ ವರ್ಗಕ್ಕೂ ಸಹ ಅನುದಾನ ಹಾಗೂ ಮೀಸಲಾತಿಗಳನ್ನ ನೀಡಬೇಕು. ಒಂದು ಕಣ್ಣಿಗೆ ಬೆಣ್ಣೆ ಹಚ್ಚಿ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಗುರುವಾರ, ಶುಕ್ರವಾರ ಅಧಿವೇಶನದಲ್ಲಿ ನಡೆದಂತಹ ಘಟನೆಗಳು ಇಡೀ ರಾಜ್ಯಕ್ಕೆ ಹೇಯ ಅನ್ನಿಸ್ತಾ ಇದ್ದು, ನಾಡಿನ ಜನರಿಗೆ ಅವಮಾನ ಆಗುತ್ತಿದೆ. ಮೈನಾರಿಟಿ ತುಷ್ಠೀಕರಣ ಹಾಗೂ ಸಚಿವರ ಹನಿಟ್ರ್ಯಾಪ್ ಬಗ್ಗೆ ಪ್ರಶ್ನೆ ಮಾಡಿದ್ದಕೆ 18 ಶಾಸಕರನ್ನ ಸಸ್ಪೆಂಡ್ ಮಾಡಿದ್ದಾರೆ. ದಲಿತರ ಹಣವನ್ನ ಗ್ಯಾರಂಟಿಗೋಸ್ಕರ ಉಪಯೋಗಿಸಿ ದಲಿತರ ಅಭಿವೃದ್ಧಿಗೆ ಕನ್ನ ಹಾಕುತ್ತಿರುವ ಸರ್ಕಾರದ ವಿರುದ್ಧ ಇಂದು ಬಿಜೆಪಿಯಿಂದ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಕಾಂಗ್ರೆಸ್ ಸರ್ಕಾರ ಸದನದಲ್ಲಿ ನಾವು ಮಾತನಾಡುವ ಹಕ್ಕನ್ನು ಕಿತ್ತುಕೊಳ್ತಿದ್ದು, ಅವರ ತಪ್ಪುಗಳ ಬಗ್ಗೆ ಧ್ವನಿಯೆತ್ತಿದ್ದಕ್ಕಾಗಿ ನಮ್ಮ ಶಾಸಕರಿಗೆ ಆರು ತಿಂಗಳು ಸದನಕ್ಕೆ ಬರದಂತೆ ಹಾಗೂ ಸವಲತ್ತುಗಳನ್ನ ಬಳಸಿಕೊಳ್ಳದಂತೆ ಹೇಳುತ್ತಿರೋದು ಸರಿಯಲ್ಲ ಎಂದರು.
ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದ ನಡೆಯನ್ನ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದಿದ್ದು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.