ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮೇಖಳಿಯ ರಾಮಮಂದಿರದ ಲೋಕೇಶ್ವರ ಸ್ವಾಮೀಜಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಬಾಗಲಕೋಟೆ ನಗರದ ಲಾಡ್ಜ್‌ನಲ್ಲಿ ಅತ್ಯಾಚಾರ ನಡೆಸಿ, ಬಳಿಕ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಾಲಕಿಯನ್ನು ಬಿಟ್ಟಿದ್ದಾರೆ. ಬಾಲಕಿ 17 ವರ್ಷದವಳಾಗಿದ್ದು, ಆರೋಗ್ಯ ಸಮಸ್ಯೆ ಸರಿಯಿಲ್ಲದ ಕಾರಣ ಆಗಾಗ ತಾಯಿಯು ಮಠಕ್ಕೆ ಕರೆದುಕೊಂಡು ಹೋಗಿ ಅಲ್ಲೇ ಬಿಟ್ಟು ಹೋಗುತ್ತಿದ್ದಳಂತೆ. ವಾರಗಟ್ಟಲೇ ತಮ್ಮ ಮಗಳನ್ನು ಅಲ್ಲೆ ಬಿಟ್ಟಿದ್ದರಿಂದ ಸ್ವಾಮೀಜಿ ಆಕೆಯನ್ನು ಮನೆಗೆ ಬಿಡಲು ಮೇ. 13ರಂದು, ಕಾರಿನಲ್ಲಿ ಇಬ್ಬರೇ ಹೋಗುವಾಗ ರಾಯಚೂರಿನಲ್ಲಿ 2 ದಿನ ಇದ್ದು ಅಲ್ಲಿಯೂ ಅತ್ಯಾಚಾರ ಎಸಗಿ, ನಂತರ ಮೇ 15ರಂದು ಬಾಗಲಕೋಟೆಗೆ ಬಂದು, ಅಲ್ಲಿಯ ಲಾಡ್ಜ್‌ನಲ್ಲಿ ಮತ್ತೊಮ್ಮೆ ಅತ್ಯಾಚಾರ ಎಸಗಿದ್ದಾರೆ. ನಂತರ ಆಕೆಗೆ “ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡ್ತೀನಿ” ಎಂದು ಬೆದರಿಕೆ ಹಾಕಿ, ಮೇ 16ರಂದು, ಆಕೆಯನ್ನು ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಈ ಬಗ್ಗೆ ಬಾಗಲಕೋಟೆಯ ನವನಗರ ಮಹಿಳಾ ಠಾಣೆಯಲ್ಲಿ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೇ 17ರಂದು ಎಫ್‌ಐಆರ್ ದಾಖಲಾಗಿದೆ. ಬಾಲಕಿ ನೀಡಿದ ಹೇಳಿಕೆ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದಿಷ್ಟಲ್ಲದೇ, 2021ರಲ್ಲೂ ಇಂತದ್ದೆ ಪ್ರಕರಣಕ್ಕೆ ಗ್ರಾಮಸ್ಥರು ಸ್ವಾಮೀಜಿಗೆ ಧರ್ಮದೇಟು ನೀಡಿ ಬುದ್ದಿವಾದ ಹೇಳಿದ್ದರು, ಅಲ್ಲದೇ ಮಠದಲ್ಲಿ ಅನೇಕ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆಕ್ರೋಶ ಗ್ರಾಮಸ್ಥರಿಂದ ವ್ಯಕ್ತವಾಗಿದೆ.
ಸದ್ಯ ಈ ಪ್ರಕರಣವನ್ನು ಬೆಳಗಾವಿಯ ಮೂಡಲಗಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ತನಿಖೆ ಮುಂದುವರಿದಿದೆ.