ಬೆಳಗಾವಿ : ಬೆಳಗಾವಿ ನಗರ ಹೊರವಲಯದ ರೆಸಾರ್ಟ್ ಒಂದರಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಒಂದು ವಾರದ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಾಲಕಿ ಹೊಟ್ಟೆನೋವು ಎಂದು ಬಳಲುತ್ತಿದ್ದಾಗ ತಾಯಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯಕೀಯ ತಪಾಸಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಸಾಕೀಬ್ ಎಂಬಾತ ಮತ್ತು ಇಬ್ಬರು ಅಪ್ರಾಪ್ತರು ಸೇರಿ ಬಾಲಕಿ ಮೇಲೆ ರೆಸಾರ್ಟ್ ಒಂದರಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಾಕೀಬ್ ಎಂಬಾತ ತನ್ನ ಹೆಸರಿನಲ್ಲಿ ರೆಸಾರ್ಟ್ ನಲ್ಲಿ ರೂಮ್ ಬುಕ್ ಮಾಡಿ, ಬಾಲಕಿಯ ಸ್ನೇಹಿತನಾಗಿರುವ ಅಪ್ರಾಪ್ತ ಆಕೆಯನ್ನು ಕರೆದುಕೊಂಡು ರೂಮಿಗೆ ಹೋಗಿದ್ದು, ಮೂವರು ಸೇರಿಕೊಂಡು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ಘಟನೆ ಸಂಬಂಧ ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಾಕೀಬ್ ಮತ್ತು ಒಬ್ಬ ಅಪ್ರಾಪ್ತನನ್ನು ಈಗಾಗಲೇ ಬಂಧಿಸಿದ್ದು, ಮತ್ತೋರ್ವ ಅಪ್ರಾಪ್ತ ಬಾಲಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.