ತುಮಕೂರು:
ರಾಜ್ಯ ಸರ್ಕಾರ ಒಂದಲ್ಲಾ ಒಂದು ವಿವಾದಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಿದೆ. ಯಾವಾಗಲೂ ಅಲ್ಪ ಸಂಖ್ಯಾತರ ಪರವಾಗಿ ಇದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್, ವಿಧಾನಸಭೆಯಲ್ಲಿ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇಕಡಾ 4ರಷ್ಟು ಮೀಸಲಾತಿ ನೀಡುವ ವಿಧೇಯಕವನ್ನು ಮಂಡಿಸಿ ಅನುಮೋದನೆ ನೀಡಿತ್ತು. ಇನ್ನು ಈ ವಿಧೇಯಕ್ಕೆ ರಾಜ್ಯಪಾಲರು ಸಹಿ ಹಾಕಲು ಕಳುಹಿಸಲಾಗಿತ್ತು. ಹೀಗಾಗಿ ಈ ವಿಧೇಯಕ್ಕೆ ರಾಜ್ಯಪಾಲರು ಸಹಿ ಹಾಕದಂತೆ ಆಗ್ರಹಿಸಿ ತುಮಕೂರು ನಗರದ ಟೌನ್‌ಹಾಲ್ ಸರ್ಕಲ್‌ನಲ್ಲಿ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರ, ಹಿಂದೂ ವಿರೋಧಿ, ಸಂವಿಧಾನ ವಿರೋಧಿ ಕಾಂಗ್ರೆಸ್ ಸರ್ಕಾರ ಎಂದು ಆಕ್ರೋಶ ಹೊರಹಾಕಿದ್ದಾರೆ. ನಗರದ ಟೌನ್ ಹಾಲ್ ನಿಂದ ಡಿಸಿ ಕಚೇರಿಯವರೆಗೆ ತೆರಳಿ, ಡಿಸಿ ಕಚೇರಿ ಮುಂಭಾಗದಲ್ಲಿ ಘೋಷಣೆಗಳನ್ನು ಕೂಗಿ ತಹಶೀಲ್ದಾರ್ ರಾಜೇಶ್ವರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪ್ರದೀಪ್, ರಾಜ್ಯ ಸರ್ಕಾರವು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಮುಸಲ್ಮಾನರಿಗೆ ನಾಲ್ಕು ಪರ್ಸೆಂಟ್ ಮೀಸಲಾತಿ ಪರಿಚಯಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಆದರೆ ನಮ್ಮ ದೇಶದ ಸಂವಿಧಾನದಲ್ಲಿ ಯಾವುದೇ ಧರ್ಮಕ್ಕೆ ಮೀಸಲಾತಿ ನೀಡಬಾರದೆಂದು ಅಂಬೇಡ್ಕರ್ ಅವರೇ ತಿಳಿಸಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿ ಕೆಲಸವನ್ನು ಮಾಡುತ್ತಿದ್ದು, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಾರೆ. ಇವರು ಧರ್ಮಗಳ ನಡುವೆ ಜಗಳ ತಂದಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಒಟ್ಟಿನಲ್ಲಿ, ಸದಾ ಒಂದಲ್ಲಾ ಒಂದು ವಿವಾದಗಳನ್ನೇ ಸೃಷ್ಟಿ ಮಾಡಿಕೊಳ್ಳುತ್ತಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೊಂದು ವಿವಾದಕ್ಕೆ ರಾಜ್ಯದ ಜನ ಹೇಗೆ ಪ್ರತಿಕ್ರಿಯಿಸುತ್ತಾರೋ ಕಾದುನೋಡಬೇಕಿದೆ.