ದೇಶ:
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಕ್ರೌರ್ಯ ಖಂಡಿಸಿ ಭಾರತ ಪಾಕ್ ಗೆ ಪೆಟ್ಟಿನ ಮೇಲೆ ಪೆಟ್ಟು ನೀಡ್ತಿದೆ. ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸಿದ ಬೆನ್ನಲ್ಲೆ ಇದೀಗ ಚೆನಾಬ್ ನದಿಯ ಬಾಗ್ಲಿಹಾರ್ ನೀರನ್ನ ಬಂದ್ ಮಾಡಿದೆ. ಬಾಗ್ಲಿಹಾರ್ ಅಣೆಕಟ್ಟೆಯಿಂದ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ನೀರನ್ನು ಸಂಪೂರ್ಣ ನಿಲ್ಲಿಸಿದೆ. ಜೊತೆಗೆ, ಝೇಲಂ ನದಿಯ ಕಿಶನ್‌ಗಂಗಾ ಡ್ಯಾಂನಿಂದಲೂ ಹೋಗುತ್ತಿದ್ದ ಹೊರ ಹರಿವನ್ನು ಬಂದ್ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.
ಹೌದು, ಸಿಂಧೂ ನದಿ ಮತ್ತು ಅದರ ಉಪನದಿಗಳ ಬಳಕೆ ಕುರಿತು 1960ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಿಂಧೂ ಜಲ ಒಪ್ಪಂದವಾಗಿತ್ತು. ಆದರೆ ಬಾಗ್ಲಿಹಾರ್ ಅಣೆಕಟ್ಟೆಯ ಬಗ್ಗೆ ಪಾಕಿಸ್ತಾನ ಆಕ್ಷೇಪಿಸಿ ಈ ಹಿಂದೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯನ್ನು ಕೋರಿತ್ತು. ಇದೆಲ್ಲದರ ನಡುವೆ ಕಿಶನ್‌ಗಂಗಾ ಅಣೆಕಟ್ಟು ಕೂಡ ಕಾನೂನು ಮತ್ತು ರಾಜತಾಂತ್ರಿಕ ಪರಿಶೀಲನೆಗೆ ಒಳಗಾಗಿತ್ತು.
ಜಮ್ಮುವಿನ ರಾಂಬನ್ನಲ್ಲಿರುವ ಬಾಗ್ಲಿಹಾರ್ ಮತ್ತು ಉತ್ತರ ಕಾಶ್ಮೀರದ ಕಿಶನ್ಗಂಗಾದಲ್ಲಿರುವ ಜಲವಿದ್ಯುತ್ ಡ್ಯಾಂಗಳಿಂದ ಪಾಕ್‌ಗೆ ನೀರು ಹರಿಸುವುದನ್ನು ಭಾರತ ತಡೆದಿದೆ ಎನ್ನಲಾಗ್ತಿದೆ. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ಮಾಡಿ 26 ಜನರನ್ನು ಹತ್ಯೆಗೈದ ಬಳಿಕ ಭಾರತ, ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಈಗ ಪಾಕ್ ವಿರುದ್ಧ ಸಿಡಿದೆದ್ದಿರುವ ಭಾರತ ಒಂದರ ಮೇಲೆ ಒಂದು ಶಾಕ್ ಕೊಡ್ತಿದೆ.