ಪಾವಗಡ ಪೊಲೀಸ್ ಠಾಣೆತುಮಕೂರು
ಪಾವಗಡ:
ಪಾವಗಡದ ಪತ್ರಕರ್ತ ರಾಮಾಂಜಿನಪ್ಪ ಮೇಲೆ ಮೂವರು ಮಹಿಳೆಯರು ನಡು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಹಲ್ಲೆ ನಡೆಸಿರೋ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಹೌದು ಪ್ರಕರಣ ದಾಖಲಾಗಿ ಮೂರು ದಿನಕ್ಕೆ ಜಾಮೀನು ಪಡೆದು ಬಿಡುಗಡೆಯಾಗಿದ್ದ ಆರೋಪಿಗಳ ವಿರುದ್ಧ ATTEMPT TO MURDER ಕೇಸ್ ದಾಖಲಾಗಿದೆ.
ಪಾವಗಡ ಪಟ್ಟಣದ ಗಡಿನಾಡು ಮಿತ್ರ ಪತ್ರಕರ್ತ ಹಾಗೂ ಸಂಪಾದಕ ರಾಮಾಂಜಿನಪ್ಪ ವ್ಯಕ್ತಿಯೋರ್ವನ ಅಕ್ರಮ ಸಂಬಂಧದ ಬಗ್ಗೆ ಸುದ್ದಿ ಮಾಡಿದ್ದರಿಂದ, ಅವರನ್ನು ನಡು ರಸ್ತೆಯಲ್ಲೇ ಮೂವರು ಮಹಿಳೆಯರು ಎಳೆದಾಡಿ, ಹಿಗ್ಗಾಮುಗ್ಗಾ ಥಳಿಸಿದ್ದರು. ಹಲ್ಲೆಯಿಂದ ಸುಮಾರು 20 ದಿನಗಳ ಕಾಲ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇಂದಿಗೂ ಮನೆಯಿಂದ ಹೊರ ಬರಲಾಗದ ಸ್ಥಿತಿಯಲ್ಲಿ ಇದ್ದಾರೆ. ಈ ಸಂಬಂಧ ನಾಲ್ವರ ಮೇಲೆ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜೈಲಿಗೆ ಹಾಕಲಾಗಿತ್ತು. ಆದರೆ ಕೇವಲ ಮೂರೇ ದಿನಕ್ಕೆ ಇವರಿಗೆ ಕೋರ್ಟ್ನಿಂದ ಜಾಮೀನು ಸಿಕ್ಕಿದ್ದು, ಜೈಲಿನಿಂದ ಹೊರಬಂದಿದ್ದರು. ಇದನ್ನು ಖಂಡಿಸಿದ ಪತ್ರಕರ್ತರು ಹಾಗೂ ಸಮುದಾಯದವರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ಅಲ್ಲದೇ ಮಾರಣಾಂತಿಕ ಹಲ್ಲೆಯಾಗಿದ್ದರು ಮೂರೇ ದಿನಕ್ಕೆ ಬಿಡುಗಡೆ ಆದರೆ, ಮುಂದೆ ದೊಡ್ಡ ದೊಡ್ಡ ಪ್ರಕರಣಗಳು ಮಾಡಿ ಬೇಲಿನ ಮೇಲೆ ಹೊರಬರಬಹುದಲ್ಲವೇ ಎಂಬ ಚರ್ಚೆಗಳು ಸಾರ್ವಜನಿಕರ ವಲಯದಲ್ಲಿ ನಡೆದಿತ್ತು.
ಹೀಗಾಗಿ ಕುರುಬ ಸಮುದಾಯದ ಹಾಗೂ ಸಂಪಾದಕರ ಸಂಘದಿಂದ ಜನವರಿ 30ರಂದು ರಂದು ಪಾವಗಡ ಬಂದ್ ಮಾಡಬೇಕು ಎಂಬುದಾಗಿ ಬಿತ್ತಿ ಪತ್ರಗಳನ್ನು ಹೊರಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಬೆನ್ನಲ್ಲೇ ಅಲರ್ಟ್ ಆದ ಪೊಲೀಸರು ಆರೋಪಿಗಳ ಮೇಲೆ 109 ಬಿ ಎನ್ ಎಸ್ ಕಾಲಂ ಅಡಿಯಲ್ಲಿ ATTEMPT TO MURDER ಕೇಸ್ ದಾಖಲು ಮಾಡಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಮಾರಣಾಂತಿಕ ಹಲ್ಲೆ ನಡೆಸಿದ್ದವರನ್ನು ಮೂರೇ ದಿನಕ್ಕೆ ಬಿಟ್ಟು ಕಳುಹಿಸಿ, ಇದೀಗ ಪ್ರತಿಭಟನೆ, ಬಂದ್ ಮಾಡುತ್ತೇವೆ ಅಂದಿದ್ದಕ್ಕೆ ಕೇಸ್ ದಾಖಲಿಸಿಕೊಂಡಿರೋದು ಪೊಲೀಸರ ಮೇಲೆ ಹಲವು ಅನುಮಾನಕ್ಕೆ ದಾರಿ ಮಾಡಿಕೊಡ್ತಿದೆ. ಅದೇನೆ ಆಗಲಿ ಪತ್ರಕರ್ತನಿಗೆ ಸೂಕ್ತ ನ್ಯಾಯ ಒದಗಿಸಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ.