ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಾಯಕ ನಟನಾಗಿ ಅಭಿನಯ ಮಾಡಿರುವ ಮೊಟ್ಟ ಮೊದಲ ಸಿನಿಮಾ ಅಪ್ಪು ಇಂದು ರಾಜ್ಯಾದ್ಯಂತ ಮರು ಬಿಡುಗಡೆ ಆಗಿದೆ. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದ್ದು ಜೊತೆಗೆ ಚಿತ್ರಮಂದಿರಗಳಲ್ಲಿ ಫಸ್ಟ್ ಶೋ ಟಿಕೆಟ್ ಸೋಲ್ಡ್ ಔಟ್ ಆಗಿವೆ.
ಮಾರ್ಚ್ 17 ರಂದು ಪುನೀತ್ ರಾಜ್ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಮೂರು ದಿನ ಮೊದಲೇ ಅವರ ಸಿನಿಮಾ ರೀ ರಿಲೀಸ್ ಆಗಿದೆ. 23 ವರ್ಷಗಳ ನಂತರ ಪುರಿ ಜಗನ್ನಾಥ್ ನಿರ್ದೇಶನದ ಈ ಸಿನಿಮಾ ಮತ್ತೆ ತೆರೆ ಮೇಲೆ ಬಂದಿದೆ.
ಬೆಂಗಳೂರು ಮಾತ್ರ ಅಲ್ಲ ರಾಜ್ಯಾದ್ಯಂತ ಇರುವ 100ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಅಪ್ಪು ಸಿನಿಮಾ ಇಂದು ಮರು ಬಿಡುಗಡೆ ಆಗುತ್ತಿದೆ. ಕಳೆದ ವರ್ಷ ಜಾಕಿ ಸಿನಿಮಾವನ್ನು ರೀ ರಿಲೀಸ್ ಮಾಡಲಾಗಿತ್ತು. ಇದಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದ್ದರಿಂದ ದಾಖಲೆ ಮಟ್ಟದಲ್ಲಿ ಹಣ ಸಂಗ್ರಹ ಮಾಡಿತ್ತು. ಇದೀಗ ಅಪ್ಪು ಸಿನಿಮಾವನ್ನು ಇಂದು ರೀ ರಿಲೀಸ್ ಮಾಡಲಾಗುತ್ತಿದೆ. ಎಲ್ಲೆಡೆ ಅಪ್ಪು ಚಿತ್ರದ ರಿಲೀಸ್ ಅಬ್ಬರ ಜೋರಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ಫೋಟೋಗಳು ವೈರಲ್ ಆಗಿವೆ.
ಇದೇ ಮಾರ್ಚ್ 17ಕ್ಕೆ ಪುನೀತ್ ರಾಜ್ಕುಮಾರ್ ಅವರ 50ನೇ ವರ್ಷದ ಹುಟ್ಟಿದ ಹಬ್ಬ. ಇದರ ವಿಶೇಷವಾಗಿ ಪವರ್‌ಸ್ಟಾರ್ ಅಭಿಮಾನಿಗಳು ಅಪ್ಪು ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರವನ್ನ ರಿ-ರಿಲೀಸ್ ಮಾಡಿ ಖುಷಿ ಪಟ್ಟಿದ್ದಾರೆ. ಶೋ ಆರಂಭವಾಗಿ ಸ್ಕ್ರೀನ್ ಮೇಲೆ ಅಪ್ಪುನ ನೋಡುತ್ತಿದ್ದಂತೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.
ಅಪ್ಪು ಚಿತ್ರದಲ್ಲಿ ರಕ್ಷಿತಾ ಅವರು ನಾಯಕಿಯಾಗಿ ನಟಿಸಿದ್ದರು. ಅದು ಅವರ ಮೊದಲ ಸಿನಿಮಾ. ಈಗ ಆ ಚಿತ್ರ ರೀ-ರಿಲೀಸ್ ಆಗಿರುವುದಕ್ಕೆ ರಕ್ಷಿತಾ ಕೂಡ ತುಂಬಾ ಖುಷಿಪಟ್ಟಿದ್ದಾರೆ.