ತುಮಕೂರು : ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಬಲಿ..? ಹುಟ್ಟುವ ಮೊದಲೇ ಉಸಿರು ಕಸಿದುಕೊಂಡ್ರು

ತುಮಕೂರು ಜಿಲ್ಲಾಸ್ಪತ್ರೆ
ತುಮಕೂರು ಜಿಲ್ಲಾಸ್ಪತ್ರೆ
ತುಮಕೂರು

ತುಮಕೂರು:

ಸದ್ಯ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಜೀವಕ್ಕೆ ಗ್ಯಾರೆಂಟಿ ಇಲ್ಲ. ಪದೇ ಪದೇ ಆಸ್ಪತ್ರೆಯ ಕರ್ಮಕಾಂಡ ಸುದ್ದಿಯಾಗುತ್ತಿದ್ದರು ಕ್ಯಾರೇ ಅನ್ನುತ್ತಿಲ್ಲ ಜಿಲ್ಲಾ ಶಸ್ತ್ರಚಿಕಿತ್ಸಕ ಮತ್ತು ಆರೋಗ್ಯ ಇಲಾಖೆ. ರೋಗಿಗಳು, ಗರ್ಭಿಣಿಯ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಜಿಲ್ಲಾಸ್ಪತ್ರೆ ಇದೀಗ ತಾಯಿ ಗರ್ಭದಲ್ಲಿದ್ದ ಮಗುವನ್ನೇ ಬಲಿ ಪಡೆದು ನಿರ್ಲಕ್ಷ್ಯದ ಕ್ರೌರ್ಯ ಮೆರೆದಿದೆ.

ಹೌದು ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಬಲಿ ಆಗಿದೆ. ಈ ಹಿಂದೆ ಬಾಣಂತಿ ಮತ್ತು ನವಜಾತ ಅವಳಿಶಿಶುಗಳ ಸಾವಿನಿಂದ ಸುದ್ದಿಯಾಗಿದ್ದ ಜಿಲ್ಲಾಸ್ಪತ್ರೆ ಈಗ ಮತ್ತೊಂದು ಬಲಿ ಪಡೆದಿದೆ. ಈ ಬಾರಿ ಜಿಲ್ಲಾಸ್ಪತ್ರೆಯ ಪರಮ ಪಾಪಿಗಳು ತಾಯಿ ಗರ್ಭದಲ್ಲೇ ಉಸಿರುಗಟ್ಟಿಸಿದ್ದಾರೆ ಅನ್ನೋ ಗಂಭೀರ ಆರೋಪ  ಕೇಳಿ ಬರುತ್ತಿದೆ.

ತುಮಕೂರು ಶಾಂತಿನಗರದ ಫಿಜಾ ಫಿರ್ಡೋಸ್ ಅವರಿಗೆ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. 9 ತಿಂಗಳು ತುಂಬಿದ್ದರಿಂದ‌ ಹೆರಿಗೆ ನೋವೆಂದು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ವೈದ್ಯರು ಇರಲಿಲ್ಲ. ಅಲ್ಲಿದ್ದ ಸಿಬ್ಬಂದಿಯದ್ದೇ ಕಾರುಬಾರಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಂಡು ಬರುವಂತೆ ಹೊರಗಡೆ ಚೀಟಿ ಬರೆದು ಗರ್ಭಿಣಿಯನ್ನು ಕಳುಹಿಸಿಕೊಟ್ಟಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲದಿದ್ದರಿಂದ ಹೊರಗಡೆ ಸ್ಕ್ಯಾನಿಂಗ್ ಗೆ ಕರೆದುಕೊಂಡು ಹೋದರೆ  ಪ್ರಯೋಜನವಾಗಿಲ್ಲ. ಅಲೆದು ಸುಸ್ತಾಗಿದ್ದಾರೆ, ಅಷ್ಟರಲ್ಲಿ ಫಿಜಾಗೆ ಹೊಟ್ಟೆನೋವು ತುಸು ಕಡಿಮೆಯಾಗಿದೆ. ಹೀಗಾಗಿ ಮನೆಗೆ ಹಿಂತಿರುಗಿದ್ದಾರೆ.

ಫಿಜಾಗೆ ಭಾನುವಾರ ಬೆಳಗ್ಗೆ ‌ಪುನಃ ಹೊಟ್ಟೆನೋವು ಕಾಣಿಸಿಕೊಂಡಿದೆ. ಕೂಡಲೇ ಮತ್ತೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆಗ ಆಕೆಗೆ ಡಾ.ಅಫಿಜಾ ಚಿಕಿತ್ಸೆ ಕೊಟ್ಟಿದ್ದಾರೆ. ಅಷ್ಟರಲ್ಲೇ ಫಿಜಾಗೆ ಸ್ಕ್ಯಾನಿಂಗ್ ಮಾಡಿಸಿಕೊಂಡು ಬಂದಿದ್ದರು. ಅದನ್ನು ನೋಡಿದ ಡಾಕ್ಟರ್  ಮಗು ಗರ್ಭದಲ್ಲೇ ಸತ್ತಿರುವುದನ್ನು ಖಚಿತಪಡಿಸಿದ್ದಾರೆ. ಮಗುವನ್ನು ಗರ್ಭದಿಂದ ತೆಗೆಯಿರಿ ಅಂತ ಡಾಕ್ಟರಿಗೆ ಹೇಳಿದರೆ, ಬಿಳಿರಕ್ತಕಣಗಳು  ಕಡಿಮೆ ಇರೋದರಿಂದ ನಾವು ತೆಗೆಯಲ್ಲ ಅಂತ ಕಥೆ ಹೇಳಿ ಡ್ರಿಪ್ ಹಾಕಿ ಸಾಗ ಹಾಕಲು ಪ್ರಯತ್ನಿಸಿದ್ದಾರೆ. ಈ ವೇಳೆ ಸಂಬಂಧಿಗಳು, ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯದ ವಿರುದ್ಧ ಸಿಡಿದು, ಪ್ರತಿಭಟನೆ ರೂಪದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಇಲ್ಲಿದ್ದು ಪ್ರಯೋಜನವಿಲ್ಲ ಅಂತ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.

ಇಷ್ಟೆಲ್ಲಾ ಆದಮೇಲೆ ಜಿಲ್ಲಾಸ್ಪತ್ರೆ ಮೊಂಡು ವಾದ ಮಾಡದೇ ಇರುತ್ತದೆಯೇ. ನಿರೀಕ್ಷೆಯಂತೆ‌ ಕಥೆ, ಚಿತ್ರಕಥೆ ರೆಡಿ ಮಾಡಿಕೊಂಡಿದ್ದರು.‌ ಇನ್ಚಾರ್ಜ್ ಆರ್ ಎಂಒ ನಾಗರಾಜ್ ಅದರ ಸಂಭಾಷಣೆಯನ್ನು ಮೀಡಿಯಾ ಮುಂದೆ ಒಪ್ಪಿಸಿದರು. ಆಸ್ಪತ್ರೆಯವರು ಹೇಳುವ ಪ್ರಕಾರ ರಾತ್ರಿ ಸ್ಕ್ಯಾನಿಂಗ್ ಮಾಡಿದ್ದರಂತೆ, ಮಗು ಸತ್ತೋಗಿತ್ತಂತೆ ಡಾಕ್ಯುಮೆಂಟೇಷನ್ ಗೆ ಅಂತ ಬರೆದುಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ.

ಇನ್ನು ಆಸ್ಪತ್ರೆಯಲ್ಲಿ ಇಷ್ಟೆಲ್ಲಾ ಆಗಿದ್ದರೂ, ಇಲ್ಲಿನ ಸಿಬ್ಬಂದಿ ಭೂಮಿಗೆ ಬರಬೇಕಿದ್ದ ಕಂದಮ್ಮನನ್ನು ತಾಯಿಯ ಗರ್ಭದಲ್ಲೇ ಉಸಿರುಗಟ್ಟಿಸಿ ಸಾಯಿಸಿದರೂ ಡಿಎಸ್ ಅನ್ನಿಸಿಕೊಂಡವರು ಮಾತ್ರ ಪತ್ತೆಯೇ ಇರಲಿಲ್ಲ. ಇನ್ನು ಈ ಅನ್ಯಾಯವನ್ನು ಪ್ರಶ್ನಿಸಿ ಕರೆ ಮಾಡಿದರೆ, ತಾಯಿಯ ಗರ್ಭದಲ್ಲೇ ಮಗು ಸಾವನ್ನಪ್ಪಿದೆ, ಇದಕ್ಕೆ ನಿಮ್ಮ ಆಸ್ಪತ್ರೆ ಸಿಬ್ಬಂದಿಯೇ ಕಾರಣ ಅಂತಾ ಹೇಳಿದರೆ, ಡಿಎಸ್ ಅಸ್ಘರ್ ಬೇಗ್ ಗರ್ಭಿಣಿ ಮಹಿಳೆಯ ಕುಟುಂಬಸ್ಥರಿಗೆ ಏನ್ ರೀ ಜನಗಳನ್ನು ಕರೆದುಕೊಂಡು ಬಂದು ರೌಡಿಸಂ ಮಾಡ್ತಾ ಇದ್ದೀರಾ. ಇವೆಲ್ಲಾ ಇಲ್ಲಿ ನಡೆಯಲ್ಲ ಅಂತಾ ದಬ್ಬಾಳಿಕೆಯ ಮಾತುಗಳನ್ನಾಡಿ ಆವಾಜ್ ಹಾಕುವ ಕೆಲಸ ಮಾಡಿದ್ದಾರಂತೆ. 

ಜಿಲ್ಲಾಸ್ಪತ್ರೆ ಅಧಿಕಾರಿ, ಸಿಬ್ಬಂದಿ ಜಾಂಡ ಹೂಡಿಕೊಂಡು ನಿರ್ಲಕ್ಷ್ಯ ಧೋರಣೆ ಮುಂದುವರೆಸುತ್ತಿದ್ದಾರೆ. ಇದರಿಂದ ಪದೇ ಪದೇ ಇಂತಹ ದುರಂತ ಸಂಭವಿಸುತ್ತಲೇ ಇರುತ್ತವೆ.  ಕೈಮೀರಿದ ಘಟನೆಗಳಿಗೆ ಯಾರನ್ನೂ ಯಾರೂ ಟೀಕಿಸಲ್ಲ, ಬೆಟ್ಟು ಮಾಡಲ್ಲ. ಹಾಗೆಯೇ ನಿರ್ಲಕ್ಷ್ಯವನ್ನೂ ಸಹಿಸೋಕೆ ಆಗಲ್ಲ. ಸಚಿವರೇ, ಶಾಸಕರೇ ದಯವಿಟ್ಟು ಜಿಲ್ಲಾಸ್ಪತ್ರೆಗೆ ಸರ್ಜರಿ ಮಾಡಿ ಬಡವರ ಆರೋಗ್ಯಕ್ಕೆ ಗ್ಯಾರೆಂಟಿ ಕೊಡಿ.

Author:

...
Editor

ManyaSoft Admin

Ads in Post
share
No Reviews