ಶಿರಾ:
ಉದ್ಯೋಗ ಸಿಗಲಿಲ್ಲವೆಂದು ತಮ್ಮ ಬದುಕೆ ಮುಗಿಯಿತು ಎಂಬ ನಿರಾಶಾವಾದಿ ಯುವ ಸಮುದಾಯದ ನಡುವೆ ಅಂಗವೈಕಲ್ಯವನ್ನೇ ಸವಾಲಾಗಿ ಸ್ವೀಕರಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡ ಅದೇಷ್ಟೊ ಮಂದಿ ನಮ್ಮ ನಡುವೆ ಇರುತ್ತಾರೆ. ಅಂಥಹವರಲ್ಲಿ ಶಿರಾ ತಾಲೂಕಿನ ಅಗ್ರಹಾರ ಗ್ರಾಮದ ನರಸಿಂಹಯ್ಯ [32] ಎಂಬುವವರು ನಮಗೆ ಸ್ಪೂರ್ತಿಯಾಗಿದ್ದಾರೆ.
ಹೌದು ನರಸಿಂಹಯ್ಯ ಶಿರಾ ತಾಲೂಕಿನ ಹಂದಿಕುಂಟೆ ಗ್ರಾಮದ ನಿವಾಸಿ. ಹುಟ್ಟುತ್ತಲೇ ಪೋಲೀಯೋ ರೋಗಕ್ಕೀಡಾದ ನರಸಿಂಹಯ್ಯ ತಮ್ಮ ಎರಡು ಕಾಲು ಹಾಗೂ ಕೈಗಳ ಸ್ವಾಧೀನ ಕಳೆದುಕೊಂಡಿದ್ದಾರೆ. ನಂತರ ತನ್ನ ಗ್ರಾಮದಲ್ಲಿಯೇ ಸ್ವಲ್ಪ ಶಿಕ್ಷಣವನ್ನು ಪೂರೈಸಿದರು. ಹೇಗೊ ಇವರ ಬಾಲ್ಯ ಕಳೆದು ಯೌವನಾವಸ್ಥೆಗೆ ಬಂದಾಗ ಕೆಲಸಕ್ಕೆ ಅಲೆದಾಡಿ ಇವರನ್ನು ಮದುವೆಯಾಗಲೂ ಯಾರೂ ಮುಂದೆ ಬರಲಿಲ್ಲ. ಹೀಗೆ ಬರಿ ನೋವು ದುಃಖದಲ್ಲಿಯೇ ಜೀವನ ಕಳೆದ ನರಸಿಂಹಯ್ಯ ಯಾರಿಗೂ ಹೊರೆಯಾಗದೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ತೀರ್ಮಾನಿಸಿ, ತನ್ನ ಸ್ವಾವಲಂಬಿ ಬದುಕಿಗಾಗಿ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ.
ಇವರಿಗೆ ನಡೆದಾಡಲು ಸೂಕ್ತ ಉಪಕರಣಗಳಿಲ್ಲದೆ, ಸರ್ಕಾರದ ತ್ರಿ ಚಕ್ರ ವಾಹನ ಪಡೆದಿದ್ದಾರೆ. ವಿಕಲಚೇತನರ ಮಾಸಾಶಾನ ಮಾತ್ರ ಇವರ ಜೀವನ ನಿರ್ವಹಣೆಗೆ ಸಹಾಯವಾಗಿದ್ದು, ಇದನ್ನು ಹೊರತು ಪಡಿಸಿದರೆ, ವಿಕಲಚೇತನರ ಬ್ಯಾಂಕಿನಿಂದ ಯಾವುದೇ ಸಹಾಯಗಳು ಇವರಿಗೆ ದೊರೆತಿಲ್ಲ. ಇನ್ನಾದರೂ ಸ್ಥಳೀಯ ಗ್ರಾಮ ಪಂಚಾಯಿತಿ, ತಹಶೀಲ್ದಾರ್ ,ಹಾಗೂ ಸಮಾಜ ಕಲ್ಯಾಣ ಇಲಾಖೆಯು ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಸೌಲಭ್ಯದಿಂದ ವಂಚಿತರಾದ ವಿಕಲಚೇತನರನ್ನು ಗುರುತಿಸಿ ಸಹಾಯ ಕಲ್ಪಿಸಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.