ಮಧುಗಿರಿ:
ಕುರಿ ರೊಪ್ಪಕ್ಕೆ ಏಕಾಏಕಿ ಬೀದಿಬಾಯಿಗಳ ಗುಂಪು ನುಗ್ಗಿದ್ದು, ನಾಯಿ ದಾಳಿಗೆ 40 ಕುರಿಗಳು ಗಾಯಗೊಂಡು ಸಾವನ್ನಪ್ಪಿವೆ.. ಈ ಘಟನೆ ಮಧುಗಿರಿ ದೊಡ್ಡಮಾಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೂದೇನಹಳ್ಳಿಯಲ್ಲಿ ಈ ದಾರುಣ ಘಟನೆ ಜರುಗಿದೆ. ಗ್ರಾಮದ ನಾಗಮ್ಮ ಎಂಬ ಮಹಿಳೆಗೆ ಸೇರಿದ ಕುರಿ ದೊಡ್ಡಿ ಮೇಲೆ ರಾತ್ರಿ ವೇಳೆ ಬೀದಿ ನಾಯಿಗಳು ಎರಗಿ ಗಾಯಗೊಳಿಸಿ ಸಾವನ್ನಪ್ಪಿವೆ, ಕುರಿಗಳ ಸಾವಿನಿಂದಾಗಿ ಸುಮಾರು 3 ಲಕ್ಷ ನಷ್ಟವಾಗಿದ್ದು, ಜೀವನಕ್ಕೆ ಆಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡು ರೈತ ಮಹಿಳೆ ಕಣ್ಣೀರಾಕುತ್ತಿದ್ದಾರೆ.
ಕುರಿದೊಡ್ಡಿಯಲ್ಲಿದ್ದ 40 ಕುರಿಗಳು ಸಾವನ್ನಪ್ಪಿದ್ದು ಗಾಯಗೊಂಡಿರೋ 8 ಕುರಿಗಳಿಗೆ ಚಿಕಿತ್ಸೆ ನೀಡಲಾಗ್ತಿದೆ. ಘಟನೆ ನಡೆಯುತ್ತಿದ್ದಂತೆ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಉಷಾ, PSI ಶ್ರೀನಿವಾಸ್ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಚಿಕಿತ್ಸೆ ನೀಡಲಾಗ್ತಿರೋ 8 ಕುರಿಗಳು ಕೂಡ ಬದುಕುಳಿಯುವುದು ಕಷ್ಟ ಎಂದು ಪಶು ವೈದ್ಯರು ತಿಳಿಸ್ತಿದ್ದಾರೆ.
ಇನ್ನು ಬದುಕಿಗೆ ಆಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡ ನಾಗಮ್ಮ ಗೋಳಾಡುತ್ತಿದ್ದು, ಮನ ಮುಟ್ಟುವಂತಿತ್ತು.. ಶಿವ ರಾತ್ರಿ ಹಬ್ಬದ ಅಂಗವಾಗಿ ಜಾಗರಣೆಯಲ್ಲಿದ್ದು ಪದೇ ಪದೇ ಎದ್ದು ನೋಡುತಿದ್ದೇವು, ಆದ್ರೆ ಬೆಳಗ್ಗೆ 4 ಗಂಟೆ ಸುಮಾರಿಗೆ ನಾಯಿಗಳ ಹಿಂಡು ಕುರಿಗಳ ಮೇಲೆ ಎರಗಿ ಗಾಯಗೊಳಿಸಿವೆ.
ಬೀದಿ ನಾಯಿಗಳ ಹಿಂಡು ದೊಡ್ಡಿಯಲ್ಲಿದ್ದ ಕುರಿಗಳನ್ನು ಅಟ್ಟಾಡಿಸಿ ಸುಮಾರು 40 ಕುರಿಗಳನ್ನು ಕೊಂದು, 8 ಕುರಿಗಳನ್ನು ವಿಚಿತ್ರವಾಗಿ ಗಾಯಗೊಳಿಸಿವೆ.ಬರಗಾಲದಲ್ಲಿ ತಮ್ಮ ಬದುಕಿನ ಆಸರೆಗಿದ್ದ ಕುರಿಗಳು ನಮ್ಮ ಕಣ್ಣಮುಂದೆ ಇಲ್ಲದಂತಾಗಿದ್ದು ನಮ್ಮ ಬದುಕನ್ನೆ ಕಿತ್ತುಕೊಂಡಿವೆ ಎಂದು ನಾಗಮ್ಮ ಕಣ್ಣಿರಿಟ್ಟ ದೃಶ್ಯ ಮನಕಲಕುವಂತಿತ್ತು.
ಇನ್ನುಬೂದೇನಹಳ್ಳಿ ಸಮೀಪದ ಕೆರೆಯಲ್ಲಿ ಕೋಳಿ ಅಂಗಡಿಗಳ ಮಾಂಸದ ತ್ಯಾಜ್ಯ ಸುರಿಯುತಿದ್ದಾರೆ. ಈ ಬಗ್ಗೆ ಕೊಡಿಗೇನಹಳ್ಳಿ ಮತ್ತು ದೊಡ್ಡಮಾಲೂರು ಗ್ರಾಮಪಂಚಾಯ್ತಿ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಬೀದಿ ನಾಯಿಗಳ ಹಾವಳಿ ಹೆಚ್ಚಾಗಲು ಪ್ರಮುಖ ಕಾರಣ ಎನ್ನಲಾಗಿದೆ.
ರಾತ್ರಿ ಸಮಯದಲ್ಲಿ ಅಂಗಡಿ ಅಥವಾ ವಾಕ್ ಮಾಡುವ ಸಾರ್ವಜನಿಕರಿಗೆ ಬೀದಿನಾಯಿಗಳು ಏಕಾಏಕಿ ದಾಳಿ ಮಾಡಿರುವ ಘಟನೆಗಳ ಸಾಕಷ್ಟು ಕಡೆ ನಡೆದಿವೆ. ಕುರಿ, ಕೋಳಿ, ಹಸು ಮತ್ತು ಮಕ್ಕಳ ಮೇಲೂ ದಾಳಿಮಾಡುತ್ತಿರುವ ಬೀದಿನಾಯಿಗಳಅಟ್ಟಹಾಸವನ್ನು ಸಂಬಂಧಪಟ್ಟ ಅಧಿಕಾರಿಗಳು ನಿಯಂತ್ರಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಸ್ಥಳಕ್ಕೆ ಪಶು ಪಾಲನಾ ಇಲಾಖೆ ವೈದ್ಯಾಧಿಕಾರಿ ಡಾ ಪ್ರದೀಪ್ ಕುಮಾರ್ ಭೇಟಿ ನೀಡಿ, ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ರು. ಮೈಲಾರಿಲಿಂಗೇಶ್ವರ ಕುರಿ ಸಂಘದ ಅಧ್ಯಕ್ಷ ನಾಗರೆಡ್ಡಿ ಭೇಟಿ ನೀಡಿ ಕುರಿಗಳನ್ನು ಕಳೆದುಕೊಂಡ ರೈತ ಮಹಿಳೆಗೆ ಪರಿಹಾರ ಒದಗಿಸುವ ಬಗ್ಗೆ ಭರವಸೆ ನೀಡಿದ್ರು. ಅದೇನೆ ಆಗಲಿ ಬೀದಿ ನಾಯಿಗಳ ಕಾಟದಿಂದಾಗಿ ಜೀವನಕ್ಕೆ ಆಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡ ರೈತ ಮಹಿಳೆಯ ಗೋಳು ಮಾತ್ರ ಹೇಳತೀರದಾಗಿದೆ.