ತಿಪಟೂರು :
ಪ್ರತಿ ವಾರ್ಡ್ ಮತ್ತು ಅಡ್ಡ ರಸ್ತೆಗೆ ನಾಮಫಲಕ ಹಾಕುವುದು ಪ್ರತಿಯೊಂದು ಪಟ್ಟಣ ಪಂಚಾಯಿತಿ, ನಗರಸಭೆ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳ ಆದ್ಯ ಕರ್ತವ್ಯ. ಕಲ್ಪತರು ತಾಲೂಕು ತಿಪಟೂರು ಈಗಾಗಲೇ ಶೈಕ್ಷಣಿಕವಾಗಿ ಹೆಚ್ಚು ಪ್ರಸಿದ್ಧಿಯನ್ನ ಪಡೆದುಕೊಂಡಿದೆ. ಅದರಂತೆ ತಿಪಟೂರನ್ನ ಜಿಲ್ಲೆಯನ್ನಾಗಿ ಮಾಡಬೇಕು ಎಂಬ ಕೂಗು ಕೂಡ ಕೇಳಿಬರ್ತಿದೆ. ಇದರ ನಡುವೆ ತಿಪಟೂರಿನಲ್ಲಿರುವ ವಾರ್ಡ್‌ಗಳಲ್ಲಿ ಸರಿಯಾದ ನಾಮಫಲಕಗಳು ಇಲ್ಲ. ಇದ್ದರೂ ಅವು ಹಾಳಾಗಿವೆ. ಇದರಿಂದ ಜನರು ವಿಳಾಸವನ್ನು ಹುಡುಕಲು ಪರದಾಡುತ್ತಿದ್ದಾರೆ.
ತಿಪಟೂರು ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದೆ. 18 ವರ್ಷ ಕಳೆದರೂ ಆರು ಅಧ್ಯಕ್ಷರು ಹಾಗೂ ಐದು ಪೌರಾಯುಕ್ತರು ಬದಲಾದರು. ಆದರೆ ಇಲ್ಲಿನ ವಾರ್ಡ್ ಗಳಿಗೆ ಹಾಗೂ ಅಡ್ಡ ರಸ್ತೆಗಳಿಗೆ ನಗರಸಭೆ ನಾಮಫಲಕ ಇಲ್ಲದೆ ಸಾರ್ವಜನಿಕರು ವಿಳಾಸ ಹುಡುಕಲು ಪರದಾಡುತ್ತಿದ್ದಾರೆ. ಒಟ್ಟು 31 ವಾರ್ಡುಗಳನ್ನು ಹೊಂದಿದೆ, ಆದ್ರೆ ಇಲ್ಲಿ ಯಾವೊಂದು ರಸ್ತೆಗೂ ಸರಿಯಾದ ನಾಮಫಲಕವಿಲ್ಲ.
ಇನ್ನು ಈ ಕುರಿತು ಪೌರಾಯುಕ್ತ ಅಧಿಕಾರಿ ವಿಶ್ವೇಶ್ವರ ಬದರಗಡೆ ಮಾತನಾಡಿ, ನಮ್ಮ ತಿಪಟೂರಿನಲ್ಲಿ ಒಟ್ಟು 31 ವಾರ್ಡ್‌ಗಳಿವೆ. ಇವುಗಳಲ್ಲಿ 3 ವಾರ್ಡ್‌ಗಳಿಗೆ ಈಗಾಗಲೇ ನಾಮಫಲಕವನ್ನ ಹಾಕಲಾಗಿದೆ. ಇನ್ನು 28 ವಾರ್ಡ್‌ಗಳಲ್ಲಿ ನಗರೋತ್ಥಾನದ ಅನುದಾನದಲ್ಲಿ ಮುಖ್ಯ ರಸ್ತೆ, ಅಡ್ಡ ರಸ್ತೆಗೆ ನಾಮಫಲಕ ಹಾಕುವ ಕೆಲಸ ಮಾಡಲಾಗುತ್ತೆ. ಜಿಲ್ಲಾಧಿಕಾರಿಗಳು ನಾಮಫಲಕಗಳನ್ನ ಹಾಕಲು ಈಗಾಗಲೇ ನಿರ್ದೇಶನ ನೀಡಿದ್ದು, ಕಮಿಟಿ ಸದಸ್ಯರ ಸಭೆ ಕರೆದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.