KORATAGERE: ಕಸ ವಿಲೇವಾರಿ ಘಟಕದಂತೆ ಕಾಣ್ತಿರೋ ಜೇನುಕೃಷಿ ಕೇಂದ್ರ

ಕೊರಟಗೆರೆ :

ಕೃಷಿ ಚಟುವಟಿಕೆಗಳಿಗೋಸ್ಕರ ಸರ್ಕಾರ ಅನುದಾನವನ್ನ ನೀಡುತ್ತಿದ್ರೂ ಸಹ ಕೊರಟಗೆರೆ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ನಿರ್ಮಿಸಲಾದ ಜೇನುಕೃಷಿ ಕೇಂದ್ರ ಮತ್ತು ಮಧುವನ ಅಧಿಕಾರಿಗಳ ನಿರ್ಲಕ್ಷದಿಂದ ಅಭಿವೃದ್ಧಿ ಕಾಣದೇ ಕಸವಿಲೇವಾರಿ ಘಟಕದಂತೆ ಪಾಳು ಬಿದ್ದಿರೋದು ವಿಪರ್ಯಾಸವೇ ಸರಿ.

ತಾಲೂಕಿನ ಕಸಬಾ ಹೋಬಳಿ ಹುಲಿಕುಂಟೆ ಗ್ರಾಮದ ಸರ್ವೆ ನಂ.207ರಲ್ಲಿ 1975 ರಲ್ಲಿ ಲಕ್ಷ ಲಕ್ಷ ಖರ್ಚುಮಾಡಿ ಜೇನುಕೃಷಿ ಕಟ್ಟಡ ನಿರ್ಮಿಸಲಾಗಿದೆ, ಆದ್ರೆ ಅಧಿಕಾರಿಗಳ ನಿರ್ಲಕ್ಷದಿಂದ ಜೇನು ಕೃಷಿಕೇಂದ್ರ ಜೇನು ಉತ್ಪಾದನೆಗೆ ಬದಲಾಗಿ ತಿಪ್ಪೆಗುಂಡಿಯಾಗಿದ್ದು ಅದ್ರಲ್ಲಿ ಕಸಕಡ್ಡಿ, ಜೋಳದ ದಿಂಡುಗಳು ತುಂಬಿದ್ದು, ಬೇಲಿಗಳು ಬೆಳೆದು ನಿಂತು ಕಟ್ಟಡವೇ ಕಣ್ಮರೆಯಾಗಿದೆ. ಕಟ್ಟಡ ಧೂಳು, ಸೊಳ್ಳೆಗಳ ಸಾಮ್ರಾಜ್ಯವಾಗಿದ್ದು, ಅಲ್ದೇ ಕಟ್ಟಡದ ಸುತ್ತಮುತ್ತ ಖಾಸಗಿ ವ್ಯಕ್ತಿಗಳ ಟ್ರಾಕ್ಟರ್‌, ಬಣವೆ, ಸೌದೆಗಳೇ ತುಂಬಿದ್ದು ಮದುವನವೇ ಮಾಯವಾಗಿ ಪಾಳು ಬಿದ್ದಿದೆ. ಅಧಿಕಾರಿಗಳು ಟ್ರೈನಿಂಗ್‌ ಹೆಸರಲ್ಲಿ ಬಿಲ್‌ ಗಳನ್ನ ಮಾಡಿಸಿಕೊಂಡು ಬರೀ ದುಡ್ಡು ತಗೊಂಡು ಹೋದೋರು ಇಲ್ಲಿಯವರೆಗೂ ಬಂದಿಲ್ಲ ಅಂತ ಸ್ಥಳೀಯರು ಆರೋಪಿಸ್ತಾಇದಾರೆ.

ಇನ್ನು ಜೇನುಕೃಷಿ ಕೇಂದ್ರ ತೋಟಗಾರಿಕೆ ಇಲಾಖೆಗೆ ಹಸ್ತಾಂತರವಾಗಿ ಬರೋಬ್ಬರಿ 10 ವರ್ಷ ಕಳೆದ್ರೂ ಅಧಿಕಾರಿವರ್ಗ ಜಮೀನು ಮತ್ತು ಕಟ್ಟಡಗಳ ದಾಖಲೆಯೇ ಇಲ್ಲವಂತೆ. ಇನ್ನು ವಿಷಯ ತಿಳಿದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕೃಷಿಕೇಂದ್ರ ಯಾಕೆ ಪಾಳುಬಿದ್ದಿದೆ, ನಿರ್ವಹಣೆ ಮಾಡ್ದೇ ಏನು ಮಾಡ್ತಾ ಇದಿರಾ..? 15ದಿನದೊಳಗೆ ಕೇಂದ್ರ ಮತ್ತೇ ಪ್ರಾರಂಭವಾಗಬೇಕು ಎಂದು ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ಬಳಿಕ ಈಗ ತೋಟಗಾರಿಕೆ ಹೆಸರಿಗೆ ಖಾತೆ ಮತ್ತು ಪಹಣಿ ಬದಲಾವಣೆಗೆ ಕಂದಾಯ ಇಲಾಖೆಗೆ ಮನವಿ ಮಾಡಿದ್ದಾರಂತೆ. ಅಲ್ದೇ ಸಭೆ ಆಗಿ 30 ದಿನ ಕಳೆದ್ರೂ ಅಧಿಕಾರಿ ವರ್ಗ ಮಾತ್ರ ಆ ಕಡೆ ಹೋಗೋ ಮನಸ್ಸು ಮಾತ್ರ ಮಾಡ್ತಿಲ್ಲ.

ಇನ್ನಾದ್ರೂ ತೋಟಗಾರಿಕೆ ಇಲಾಖೆ ಮತ್ತು ಕಂದಾಯ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳು ಇದ್ರ ಬಗ್ಗೆ ಗಮನಹರಿಸಿ ಜೇನುಕೃಷಿ ಅಭಿವೃದ್ದಿಗೆ ಸಹಕರಿಸ್ತಾರಾ ಕಾದುನೋಡಬೇಕಿದೆ.

Author:

...
Sub Editor

ManyaSoft Admin

share
No Reviews