ಮಂಗಳೂರು : ಮಂಗಳೂರು ಕರಾವಳಿಯಿಂದ ಸುಮಾರು 60-70 ನಾಟಿಕಲ್ ಮೈಲಿಗಳಷ್ಟು ದೂರದಲ್ಲಿ ಎಂಎಸ್‌ವಿ ಸಲಾಮತ್ ಹೆಸರಿನ ಹಡಗು ಮುಳುಗಿರುವ ಘಟನೆ ಇತ್ತೀಚೆಗೆ ನಡೆದಿದ್ದು, ಭಾರತೀಯ ಕರಾವಳಿ ರಕ್ಷಣಾ ದಳ 6 ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೇ 14, 2025ರಂದು ಬೆಳಗಿನ ಜಾವದಲ್ಲಿ ಎಂಎಸ್‌ವಿ ಸಲಾಮತ್ ಹಡಗಿನಲ್ಲಿ ಈ ಘಟನೆ ಸಂಭವಿಸಿದ್ದು, ಸರಕು ಹಡಗಿನಲ್ಲಿದ್ದ ಆರು ಮಂದಿ ಸಿಬ್ಬಂದಿಯನ್ನು ಭಾರತೀಯ ಕರಾವಳಿ ರಕ್ಷಣಾ ದಳ (ICG) ರಕ್ಷಿಸಿದ್ದಾರೆ. ಮಧ್ಯಾಹ್ನ 12:15 ಗಂಟೆಗೆ, ಸುರತ್ಕಲ್ ಕರಾವಳಿಯಿಂದ ಸುಮಾರು 52 ನಾಟಿಕಲ್ ಮೈಲಿಗಳಷ್ಟು ದೂರದಲ್ಲಿ ಆರು ಮಂದಿ ಒಂದು ಚಿಕ್ಕ ದೋಣಿಯಲ್ಲಿ ಇರುವುದನ್ನು ಎಂಟಿಎ ಎಪಿಕ್ ಸುಸುಯಿ ಎಂಬ ಹಡಗಿನ ಸಿಬ್ಬಂದಿ ಗುರುತಿಸಿದ್ದರು.. ಈ ಹಡಗಿನಿಂದ ಭಾರತೀಯ ಕರಾವಳಿ ರಕ್ಷಣಾ ದಳಕ್ಕೆ ತುರ್ತು ಸಂದೇಶ ನೀಡಿದ್ದರು. ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಐಸಿಜಿ ಹಡಗು ವಿಕ್ರಂ ಸ್ಥಳಕ್ಕೆ ತೆರಳಿ ಮುಳುಗುತ್ತಿದ್ದ ಹಡಗಿನಲ್ಲಿದ್ದ ಆರು ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಹಡಗು ಸಿಮೆಂಟ್ ಮತ್ತು ನಿರ್ಮಾಣ ಸಾಮಗ್ರಿಗಳ ಮಿಶ್ರ ಸರಕನ್ನು ಸಾಗಿಸುತ್ತಿದ್ದ ಹಡಗು ಮೇ 12 ರಂದು ಲಕ್ಷದ್ವೀಪದ ಕದ್ಮತ್ ದ್ವೀಪಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಈ ವೇಳೆ ಎಂಎಸ್‌ವಿ ಸಲಾಮತ್ ಹಡಗು ಮೇ 14ರಂದು ಬೆಳಗಿನ 5:30 ಗಂಟೆಗೆ ನೀರು ತುಂಬಿಕೊಳ್ಳಲಾರಂಭಿಸಿ ಮುಳುಗುತ್ತಿತ್ತು. ಮಾಹಿತಿ ತಿಳಿದ ಕೂಡಲೇ ಬಂದ ಭಾರತೀಯ ಕರಾವಳಿ ರಕ್ಷಣಾ ದಳ ಮುಳುಗುತ್ತಿದ್ದವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಿಸಲಾದ ಹಡಗಿನ ಸಿಬ್ಬಂದಿಯನ್ನು ಇಸ್ಮಾಯಿಲ್ ಷರೀಫ್, ಅಲೆಮುನ್ ಅಹ್ಮದ್ ಭಾಯ್ ಘವ್ಡಾ, ಕಕಾಲ್ ಸುಲೇಮಾನ್ ಇಸ್ಮಾಯಿಲ್, ಅಕ್ಬರ್ ಅಬ್ದುಲ್ ಸುರಾನಿ, ಕಾಸಂ ಇಸ್ಮಾಯಿಲ್ ಮೆಪಾನಿ ಮತ್ತು ಅಜ್ಮಲ್ ಎನ್ನಲಾಗಿದೆ. ಈ ಆರು ಜನರು ಮುಳುಗುತ್ತಿದ್ದ ಹಡಗನ್ನು ಬಿಟ್ಟು ಚಿಕ್ಕ ದೋಣಿಯೊಂದರಲ್ಲಿ ರಕ್ಷಣೆ ಪಡೆದುಕೊಂಡಿದ್ದರು.