ಅಮೆರಿಕಾದಿಂದ ಗಡೀಪಾರು ಮಾಡಲಾದ 112 ಭಾರತೀಯರು ಇರುವ ಅಮೆರಿಕ ವಾಯುಪಡೆಯ ವಿಶೇಷ ವಿಮಾನ ಸಿ17 ಗ್ಲೋಬ್ಮಾಸ್ಟರ್ III ನಿನ್ನೆ ಭಾನುವಾರ ತಡರಾತ್ರಿ ಅಮೃತಸರದ ಅಂತಾರಾಷ್ಟ್ರೀಯ ಶ್ರೀ ಗುರು ರಾಮ್ ದಾಸ್ ವಿಮಾನ ನಿಲ್ದಾಣಕ್ಕೆ ಬಂದಿದೆ.
ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮದ ಭಾಗವಾಗಿ, ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದವರನ್ನು ಅಮೆರಿಕ ಗಡೀಪಾರು ಮಾಡಿದ್ದು, ಗಡೀಪಾರು ಮಾಡಲಾದವರನ್ನು ಕರೆತರುತ್ತಿರುವ ಮೂರನೇ ವಿಮಾನ ಇದಾಗಿದೆ. ವಿಮಾನವು ರಾತ್ರಿ 10:03 ಕ್ಕೆ ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿದಿದೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದಿಂದ ಬಂದ ವಿಮಾನವು ಅಮೃತಸರದ ಶ್ರೀ ಗುರು ರಾಮ್ ದಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಅದರಲ್ಲಿ 112 ಮಂದಿ ಗಡೀಪಾರು ಆದವರಿದ್ದರು ಎಂದು ಮೂಲಗಳು ತಿಳಿಸಿವೆ. ಅಮೆರಿಕದಿಂದ ಗಡಿಪಾರು ಮಾಡಲಾದ 112 ಜನರಲ್ಲಿ 31 ಮಂದಿ ಪಂಜಾಬ್ನವರು, 44 ಮಂದಿ ಹರಿಯಾಣದವರು, 33 ಮಂದಿ ಗುಜರಾತ್ನವರು, ಇಬ್ಬರು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ನವರಾಗಿದ್ದಾರೆ. ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ಸಚಿವ ಎಸ್ ಜೈಶಂಕರ್, ವಾಪಸ್ ಕಳುಹಿಸಿದವರೊಂದಿಗೆ ಕೆಟ್ಟದಾಗಿ ವರ್ತಿಸದಂತೆ ನೋಡಿಕೊಳ್ಳಲು ಅಮೆರಿಕದೊಂದಿಗೆ ಜೊತೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.