ಹಿರಿಯ ರಾಜಕಾರಣಿ ಮಾಜಿ ಸಚಿವ Venkataramanappa ನಿಧನ – ಅಗಲಿದ ನಾಯಕನಿಗೆ ಸಾವಿರಾರು ಜನರ ಅಂತಿಮ ನಮನ

ಪಾವಗಡ ತಾಲೂಕಿನ ಹಿರಿಯ ರಾಜಕೀಯ ನಾಯಕ, ಮಾಜಿ ಸಚಿವ ವೆಂಕಟರಮಣಪ್ಪ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದು, ಪಾವಗಡ ತಾಲೂಕಿನಾದ್ಯಂತ ಶೋಕದ ವಾತಾವರಣ ನಿರ್ಮಾಣವಾಗಿದೆ.
ಸರಳತೆ, ಸೌಮ್ಯ ಸ್ವಭಾವ ಹಾಗೂ ಜನಪರ ಆಡಳಿತದಿಂದ ಗುರುತಿಸಿಕೊಂಡಿದ್ದ ನಾಯಕನ ಅಗಲಿಕೆಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

4 ಬಾರಿ ಶಾಸಕರಾಗಿ ಎರಡು ಬಾರಿ ಸಚಿವರಾಗಿ ಸೇವೆ
ಪಾವಗಡ ತಾಲೂಕಿನ ಹನುಮಂತನಹಳ್ಳಿ ಗ್ರಾಮದ ನಿವಾಸಿಯಾಗಿದ್ದ ವೆಂಕಟರಮಣಪ್ಪ ಅವರು, 1980-81ರಲ್ಲಿ ಪೊನ್ನಸಮುದ್ರ ಗ್ರಾಮದಿಂದ ಮಂಡಲ್ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗೋ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ರು.
ನಂತರ 4 ಬಾರಿ ಶಾಸಕರಾಗಿ ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ರು. ಇದೀಗ ಪಾವಗಡ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ವೆಂಕಟರಮಣಪ್ಪ ನಿಧನಕ್ಕೆ ಸಾವಿರಾರು ಮಂದಿ ಅಭಿಮಾನಿಗಳು, ಬೆಂಬಲಿಗರು, ಗಣ್ಯರು ಕಂಬನಿ ಮಿಡಿದಿದ್ದಾರೆ.

ಬಡವರ ಪರ ಧ್ವನಿಯಾಗಿದ್ದ ನಾಯಕನನ್ನು ಕಳೆದುಕೊಂಡಿದ್ದೇವೆ
ಇನ್ನು ಮಾಜಿ ಸಚಿವ ವೆಂಕಟರಮಣಪ್ಪ ಅವರ ಪಾರ್ಥಿವ ಶರೀರವನ್ನ ಪಾವಗಡ ಪಟ್ಟಣದ ಗುರುಭವನ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ಸುದ್ದಿ ತಿಳಿಯುತ್ತಿದ್ದಂತೆಯೇ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆದ್ರು.
ಇನ್ನು ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಅಭಿಮಾನಿಗಳು ಅವರನ್ನ ನೆನೆದು ಬಡವರ ಪರ ಧ್ವನಿಯಾಗಿದ್ದ ನಾಯಕನನ್ನು ಕಳೆದುಕೊಂಡಿದ್ದೇವೆ ಎಂದು ಕಣ್ಣೀರು ಹಾಕಿದ್ರು.

ನಾಳೆ ವೆಂಕಟರಮಣಪ್ಪ ಅವರ ಅಂತ್ಯಕ್ರಿಯೆ
ಇನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಮಾಜಿ ಸಚಿವ ಸೊಗಡು ಶಿವಣ್ಣ, ಆಂಧ್ರ ಪ್ರದೇಶದ ಮಾಜಿ ಸಚಿವ ರಘವೀರ್ ರೆಡ್ಡಿ, ಶಾಸಕ ಸುರೇಶ್ ಗೌಡ ಸೇರಿದಂತೆ ರಾಜಕೀಯ ಮುಖಂಡರು ಅಂತಿಮ ದರ್ಶನ ಪಡೆದು ಶ್ರದ್ದಾಂಜಲಿ ಸಲ್ಲಿಸಿದ್ರು.
ಇನ್ನು ನಾಳೆ ವೆಂಕಟರಮಣಪ್ಪ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಸಾಗರೋಪಾದಿಯಲ್ಲಿ ನೆಚ್ಚಿನ ನಾಯಕನ ದರ್ಶನ ಪಡೆಯಲು ಜನರು ಬರುತ್ತಿದ್ದಾರೆ.
ಇದನ್ನು ಓದಿ : ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ವೆಂಕಟರಮಣಪ್ಪ ನಿಧನ

ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟ
ಒಟ್ಟಿನಲ್ಲಿ ಗ್ರಾಮೀಣ ರಾಜಕೀಯದಿಂದ ಸಚಿವ ಸ್ಥಾನದವರೆಗೆ ಬೆಳೆದ ವೆಂಕಟರಮಣಪ್ಪ ಅವರ ಬದುಕು ಅನೇಕ ಯುವ ನಾಯಕರಿಗೆ ಸ್ಫೂರ್ತಿಯಾಗಿದ್ದು, ಅವರ ಅಗಲಿಕೆ ಜಿಲ್ಲೆಯ ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿ ಪರಿಣಮಿಸಿದೆ.

ಇದನ್ನು ನೋಡಿ : MADHUGIRIಯಲ್ಲಿ ಕೋಟ್ಯಾಂತರ ರೂ. ಗೋಲ್ಮಾಲ್ – ಇಬ್ಬರು EO SUSPEND, 6 ಜನರ ವಿರುದ್ಧ FIR




