ಬೆಂಗಳೂರಿಗೂ ಮಹಾಮಾರಿ Ebola ಎಂಟ್ರಿ? ಉಂಗಾಂಡ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ; ಆರೋಗ್ಯ ಇಲಾಖೆ ಹೈ ಅಲರ್ಟ್!

ಎಬೋಲಾ ವೈರಸ್ ಭೀತಿ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ನಡುವೆಯೇ, ಉಗಾಂಡಾದಿಂದ ಬೆಂಗಳೂರಿಗೆ ಬಂದಿದ್ದ 28 ವರ್ಷದ ಮಹಿಳೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರಿ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಸ್ತುತ ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರ
ಮಹಿಳೆಯಲ್ಲಿ Ebola ಸೋಂಕಿನ ಕೆಲವು ಸೌಮ್ಯ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತುರ್ತು ಕ್ರಮ ಕೈಗೊಂಡಿದೆ. ಇತ್ತೀಚೆಗೆ ಎಬೋಲಾ ಪೀಡಿತ ಪ್ರದೇಶಕ್ಕೆ ಪ್ರಯಾಣಿಸಿದ್ದ ಮಹಿಳೆಗೆ ಮೈಕೈ ನೋವು ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದರಿಂದ, ಆಕೆ ವಾಸ್ತವ್ಯದಲ್ಲಿದ್ದ ಹೋಟೆಲ್ನಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಂಕು ದೃಢೀಕರಣಕ್ಕಾಗಿ ಮಹಿಳೆಯ ರಕ್ತ ಪರೀಕ್ಷೆ
ಸೋಂಕು ದೃಢೀಕರಣಕ್ಕಾಗಿ ಮಹಿಳೆಯ ರಕ್ತ ಮಾದರಿಗಳನ್ನು ಸಂಗ್ರಹಿಸಿ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್ಐವಿ)ಗೆ ಪರೀಕ್ಷೆಗೆ ಕಳುಹಿಸಲಾಗಿದೆ.
ವರದಿಗಾಗಿ ಕಾಯಲಾಗುತ್ತಿದ್ದು, ಶಿಷ್ಟಾಚಾರದ ಪ್ರಕಾರ ಮರುಪರೀಕ್ಷೆಯನ್ನೂ ನಡೆಸಲಾಗುವುದು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಉಗಾಂಡಾದಲ್ಲಿ ವೇಗವಾಗಿ ಹರಡುತ್ತಿರುವ ಎಬೋಲಾ ಸೋಂಕು
ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಮಹಿಳೆಯ ಆರೋಗ್ಯ ಸ್ಥಿತಿಯನ್ನು ನಿಕಟವಾಗಿ ಪರಿಶೀಲಿಸಲಾಗುತ್ತಿದೆ. ಎಬೋಲಾ ಪೀಡಿತ ಪ್ರದೇಶದಿಂದ ಪ್ರಯಾಣಿಸಿದ ಹಿನ್ನೆಲೆ ಹಾಗೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಕಾರಣ ಯಾವುದೇ ನಿರ್ಲಕ್ಷ್ಯ ವಹಿಸದೆ ತಕ್ಷಣವೇ ಪ್ರತ್ಯೇಕ ಚಿಕಿತ್ಸೆಗೆ ಒಳಪಡಿಸಲಾಗಿದೆ. ಇದಕ್ಕೂ ಮುನ್ನ ಮೇ 17ರಂದು World Health Organization ಆಫ್ರಿಕಾದ ಕಾಂಗೋ ಮತ್ತು ಉಗಾಂಡಾದಲ್ಲಿ ಎಬೋಲಾ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ‘ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ’ ಎಂದು ಘೋಷಿಸಿತ್ತು.
ಇದನ್ನು ಓದಿ : ನಿಕೇತ್ ರಾಜ್, ಭಾವನಾ ರಾಮಣ್ಣ ಸೇರಿ ಹಲವು KPCC ಪದಾಧಿಕಾರಿಗಳು ಹುದ್ದೆಯಿಂದ ವಜಾ!

21 ದಿನಗಳ ಕಾಲ ಆರೋಗ್ಯ ಮೇಲ್ವಿಚಾರಣೆ
ಎಬೋಲಾ ಪೀಡಿತ ದೇಶಗಳಿಗೆ ಭೇಟಿ ನೀಡಿ ರಾಜ್ಯಕ್ಕೆ ಮರಳುವವರು 21 ದಿನಗಳ ಕಾಲ ಆರೋಗ್ಯ ಮೇಲ್ವಿಚಾರಣೆ ಹಾಗೂ ಸ್ವಯಂ ವೀಕ್ಷಣೆಯಲ್ಲಿರಬೇಕು ಎಂದು ಕರ್ನಾಟಕ ಆರೋಗ್ಯ ಇಲಾಖೆ ಈಗಾಗಲೇ ಸೂಚಿಸಿದೆ. ಯಾವುದೇ ಲಕ್ಷಣಗಳು ಕಂಡುಬಂದ ತಕ್ಷಣ ಸಮೀಪದ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ನೀಡಬೇಕು ಎಂದು ಇಲಾಖೆ ಸಲಹೆ ನೀಡಿದೆ.
ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ ಅನ್ನು ಪ್ರತ್ಯೇಕತಾ ಕೇಂದ್ರ
ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ ಅನ್ನು ಪ್ರತ್ಯೇಕತಾ ಕೇಂದ್ರವಾಗಿ ಗುರುತಿಸಲಾಗಿದೆ.
ಜೊತೆಗೆ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯನ್ನು ಸಂಪರ್ಕ ತಡೆ ಹಾಗೂ ಚಿಕಿತ್ಸಾ ಕೇಂದ್ರವಾಗಿ ಸಜ್ಜುಗೊಳಿಸಲಾಗಿದೆ.

ಮಂಗಳೂರಿನಲ್ಲಿ ನವ ಮಂಗಳೂರು ಬಂದರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಶ್ರೀನಿವಾಸ ಬಂದರು ಆಸ್ಪತ್ರೆಯನ್ನು ಸಂಪರ್ಕ ತಡೆ ಕೇಂದ್ರವಾಗಿ ಗುರುತಿಸಲಾಗಿದ್ದು, ವೆನ್ಲಾಕ್ ಜಿಲ್ಲಾಸ್ಪತ್ರೆಯನ್ನು ಪ್ರತ್ಯೇಕತಾ ಹಾಗೂ ಚಿಕಿತ್ಸಾ ಕೇಂದ್ರವಾಗಿ ನಿಗದಿಪಡಿಸಲಾಗಿದೆ.
ಇದನ್ನು ನೋಡಿ : ಬೆಂಗಳೂರಲ್ಲಿ ನಿಲ್ಲದ ಮಳೆ ಅವಾಂತರ – ಹೋಟೆಲ್, ಅಂಗಡಿಗಳಿಗೆ ನುಗ್ಗಿದ ನೀರು




