ಪೋಕ್ಸೊ ಪ್ರಕರಣ – ವಚನಾನಂದ ಸ್ವಾಮೀಜಿಯ ನಿರೀಕ್ಷಣಾ ಜಾಮೀನು ರದ್ದುಪಡಿಸಿದ High Court

ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗಳಿಗೆ High Court ಮಹತ್ವದ ಶಾಕ್ ನೀಡಿದೆ. ಶ್ರೀಗಳಿಗೆ ಈ ಹಿಂದೆ ಮಂಜೂರಾಗಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿ ಆದೇಶ ಹೊರಡಿಸಿದೆ.
ಬಂಧನದ ಭೀತಿಯಿಂದ ಪಾರು
ಸಂತ್ರಸ್ತ ಬಾಲಕನ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಪ್ರಕಟಿಸಿದೆ. ಆದರೆ, ಸ್ವಾಮೀಜಿಗಳಿಗೆ ನಿಯಮಿತ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ನೀಡಲಾಗಿದೆ. ಹೀಗಾಗಿ ಸದ್ಯಕ್ಕೆ ವಚನಾನಂದ ಸ್ವಾಮೀಜಿಗಳು ಬಂಧನದ ಭೀತಿಯಿಂದ ಪಾರಾಗಿದ್ದು, ಮೂರು ವಾರಗಳವರೆಗೆ ನಿರೀಕ್ಷಣಾ ಜಾಮೀನಿನ ರಕ್ಷಣೆ ಮುಂದುವರಿಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದನ್ನು ಓದಿ : ಪೋಕ್ಸೋ ಕೇಸ್ನಲ್ಲಿ ವಚನಾನಂದ ಶ್ರೀಗಳಿಗೆ ಬಂಧನದ ಭೀತಿ!

ಜಾಮೀನು ನೀಡಿದ ವಿಧಾನವೇ ಸರಿಯಲ್ಲ
ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 7ರಂದು ಪೋಕ್ಸೋ ದೂರು ದಾಖಲಾಗಿತ್ತು. ಆದರೆ, ದೂರು ದಾಖಲಾಗುವ ಒಂದು ದಿನ ಮುಂಚೆಯೇ ಅಂದರೆ ಮೇ 6ರಂದು ಸ್ವಾಮೀಜಿಗಳಿಗೆ ನಿರೀಕ್ಷಣಾ ಜಾಮೀನು ದೊರೆತಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಜಾಮೀನು ನೀಡಿದ ವಿಧಾನವೇ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.
ರೆಗ್ಯುಲರ್ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಶ್ರೀಗಳಿಗೆ High Court ಸೂಚನೆ
“ದೂರು ದಾಖಲಾಗುವ ಮುನ್ನವೇ ಜಾಮೀನು ನೀಡಿದ ರೀತಿ ಆಘಾತಕಾರಿ. ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಿದ ವಿಧಾನ ಸರಿಯಾಗಿಲ್ಲ,” ಎಂದು ಈ ಹಿಂದೆ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿ, ಶ್ರೀಗಳಿಗೆ ನೋಟಿಸ್ ಜಾರಿ ಮಾಡಿತ್ತು. ದೂರು ದಾಖಲಾಗುವ ಒಂದು ವಾರಕ್ಕೂ ಮೊದಲೇ ಜಾಮೀನು ನೀಡಿರುವುದು ನಿಯಮಬಾಹಿರ ಎಂದು ಹೇಳಿರುವ ನ್ಯಾಯಾಲಯ, ಈಗ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿ ಆದೇಶಿಸಿದೆ. ಮೂರು ವಾರಗಳೊಳಗೆ ನಿಯಮಾನುಸಾರ ರೆಗ್ಯುಲರ್ ಜಾಮೀನು ಕೋರಿ ಅರ್ಜಿ ಸಲ್ಲಿಸುವಂತೆ ವಚನಾನಂದ ಸ್ವಾಮೀಜಿಗಳಿಗೆ ಸೂಚನೆ ನೀಡಿದೆ.

ಇದನ್ನು ನೋಡಿ : MAGIC SHOW ವೇಳೆ ಕುಸಿದ ಶಾಲಾ ವೇದಿಕೆ -12 ಮಕ್ಕಳಿಗೆ ಗಾಯ, ಪೋಷಕರ ಆಕ್ರೋಶ




