Healthy Tips : ಹದಿಹರೆಯದವರು ವ್ಯಾಪಿಂಗ್ (ಹೊಗೆ ಮೂಲಕ ಒಂದು ರೀತಿಯ ಡ್ರಗ್ ಸೇವನೆ) ಶ್ವಾಸಕೋಶದ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ.

Healthy Tips : ಧೂಮಪಾನ ಮಾತ್ರವಲ್ಲ, ಮನೆಯೊಳಗಿನ ಅಪಾಯಗಳೂ ಗಂಭೀರ
ಸಾಮಾನ್ಯವಾಗಿ ಶ್ವಾಸಕೋಶದ ಕ್ಯಾನ್ಸರ್ಗೆ ಧೂಮಪಾನ ಮತ್ತು ವಾಯುಮಾಲಿನ್ಯವೇ ಕಾರಣ ಎನ್ನಲಾಗುತ್ತದೆ. ಆದರೆ ಕಡಿಮೆ ಗಾಳಿ ಹರಿವಿರುವ ಮನೆಗಳಲ್ಲಿ ಬಳಸುವ ಅಗರಬತ್ತಿ ಹೊಗೆ, ಏರ್ ಫ್ರೆಶ್ನರ್, ಪಾರಿವಾಳಗಳು, ಇಲಿಗಳು ಹಾಗೂ ಸಾಕುಪ್ರಾಣಿಗಳು (ನಾಯಿ–ಬೆಕ್ಕು) ಕೂಡ ಶ್ವಾಸಕೋಶದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ವೈದ್ಯರ ಪ್ರಕಾರ, ಸಾಮಾನ್ಯವಾಗಿ ಕಡೆಗಣಿಸುವ ಈ ಸಣ್ಣ ಅಂಶಗಳು ಹಾನಿಕಾರಕ ಕಣಗಳನ್ನು ಗಾಳಿಯಲ್ಲಿ ಬಿಡುಗಡೆ ಮಾಡಿ ಉಸಿರಾಟದ ವ್ಯವಸ್ಥೆಗೆ ಹಾನಿ ಮಾಡುತ್ತವೆ. ಇದರ ಪರಿಣಾಮವಾಗಿ ಆಸ್ತಮಾ, COPD ಮತ್ತು ಶ್ವಾಸಕೋಶದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ.
ಅತಿಯಾದ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳು, ಸ್ಯಾಚುರೇಟೆಡ್ ಕೊಬ್ಬು, ಮತ್ತು ಜಡ ಜೀವನಶೈಲಿ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತವೆ. ಅಧಿಕ ತೂಕವು ಡಯಾಫ್ರಾಮ್ ಮೇಲೆ ಒತ್ತಡ ಉಂಟುಮಾಡಿ ಉಸಿರಾಟದ ತೊಂದರೆ ಹೆಚ್ಚಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಗಣಿಗಾರಿಕೆ, ನಿರ್ಮಾಣ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ರಾಸಾಯನಿಕ ಹೊಗೆ ಮತ್ತು ಧೂಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕಾಯಿಲೆಗಳಿಗೆ ಹೆಚ್ಚು ಗುರಿಯಾಗುತ್ತಾರೆ ಎಂದು ಆಸ್ಟರ್ CMI ಆಸ್ಪತ್ರೆಯ ಇಂಟರ್ವೆನ್ಷನಲ್ ಪಲ್ಮನಾಲಜಿಸ್ಟ್ ಡಾ. ಸುನಿಲ್ ಕುಮಾರ್ ಕೆ ತಿಳಿಸಿದ್ದಾರೆ.
ಹದಿಹರೆಯದವರು ಮಾಡುವ ವ್ಯಾಪಿಂಗ್ (ಇ-ಸಿಗರೇಟ್ / ಹೊಗೆ ಮೂಲಕ ಡ್ರಗ್ ಸೇವನೆ) ಶ್ವಾಸಕೋಶದ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದಾರೆ. ಇದು ದೀರ್ಘಾವಧಿಯಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯ ಡಾ. ಮಂಜುನಾಥ್ ಪಿಎಚ್ ಅವರ ಪ್ರಕಾರ, ವಾಯು ಮಾಲಿನ್ಯ, ರಾಸಾಯನಿಕ ಹೊಗೆ ಮತ್ತು ಆನುವಂಶಿಕ ಕಾರಣಗಳು ಶ್ವಾಸಕೋಶದ ಕಾಯಿಲೆಗಳ ಮೇಲೆ ಪ್ರಭಾವ ಬೀರುತ್ತವೆ.
ಶ್ವಾಸಕೋಶ ಆರೋಗ್ಯ ರಕ್ಷಣೆಗೆ ಏನು ಮಾಡಬೇಕು?
- ಧೂಮಪಾನ ಮತ್ತು ವ್ಯಾಪಿಂಗ್ ಸಂಪೂರ್ಣವಾಗಿ ತ್ಯಜಿಸಿ
- ಮನೆಯೊಳಗೆ ಗಾಳಿ ಹರಿವಿಗೆ ವ್ಯವಸ್ಥೆ ಮಾಡಿ
- ಅಪಾಯಕಾರಿ ಕೆಲಸದ ಸ್ಥಳದಲ್ಲಿ ರಕ್ಷಣಾ ಸಾಧನ ಬಳಸಿ
- ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿ
ಈ ಲಕ್ಷಣಗಳನ್ನು ನಿರ್ಲಕ್ಷ್ಯಿಸಬೇಡಿ
- ನಿರಂತರ ಕೆಮ್ಮು
- ಉಸಿರಾಟದ ತೊಂದರೆ
- ಎದೆನೋವು
- ಹಠಾತ್ ತೂಕ ಇಳಿಕೆ
- ಅತಿಯಾದ ಆಯಾಸ
- ಆಗಾಗ್ಗೆ ಅನಾರೋಗ್ಯ
ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.




