ಆಸ್ಟ್ರೇಲಿಯಾದ Travis Head ಆಶಸ್ ಸರಣಿಯಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಆಶಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ತಮ್ಮ ತವರು ನೆಲವಾದ ಅಡಿಲೇಡ್ನಲ್ಲಿ ನಡೆದ ಈ ಪಂದ್ಯದಲ್ಲಿ, ಎರಡನೇ ಇನ್ನಿಂಗ್ಸ್ನಲ್ಲಿ ಹೆಡ್ ಶತಕದ ಇನ್ನಿಂಗ್ಸ್ ಆಡಿದ್ದು, ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
146 ಎಸೆತಗಳಲ್ಲಿ ಶತಕ
ಇಂಗ್ಲೆಂಡ್ ವಿರುದ್ಧದ ಈ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ Travis Head 146 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದ ಇನ್ನಿಂಗ್ಸ್ನಲ್ಲಿ ಅವರು ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ಗಳನ್ನು ಸಿಡಿಸಿದರು.
ಇದು ಹೆಡ್ ಅವರ ಟೆಸ್ಟ್ ಕರಿಯರ್ನ 11ನೇ ಶತಕವಾಗಿದ್ದು, ಪ್ರಸ್ತುತ ಆಶಸ್ ಸರಣಿಯಲ್ಲಿ ಅವರ ಎರಡನೇ ಶತಕವಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿಯೂ ಹೆಡ್ ಶತಕ ಬಾರಿಸಿದ್ದರು.

142 ರನ್ಗಳೊಂದಿಗೆ ಅಜೇಯ
ಆದಾಗ್ಯೂ, ಹೆಡ್ ಶತಕದತ್ತ ಸಾಗುವಲ್ಲಿ ಇಂಗ್ಲೆಂಡ್ ತಂಡದ ಕೈಚೆಲ್ಲಿದ ಅವಕಾಶವೂ ಪ್ರಮುಖ ಕಾರಣವಾಯಿತು. 99 ರನ್ಗಳಿಸಿದ್ದ ವೇಳೆ ಆರ್ಚರ್ ಎಸೆತದಲ್ಲಿ ಹೆಡ್ ನೀಡಿದ ಕ್ಯಾಚ್ ಅನ್ನು ಸ್ಲಿಪ್ನಲ್ಲಿ ನಿಂತಿದ್ದ ಹ್ಯಾರಿ ಬ್ರೂಕ್ ಕೈಚೆಲ್ಲಿದರು.
ಈ ತಪ್ಪಿನ ಲಾಭ ಪಡೆದ ಹೆಡ್ ದಿನದಾಟದ ಅಂತ್ಯಕ್ಕೆ 142 ರನ್ಗಳೊಂದಿಗೆ ಅಜೇಯರಾಗಿ ಉಳಿದರು.
ಸತತ ನಾಲ್ಕನೇ ಟೆಸ್ಟ್ ಶತಕ
ಇನ್ನೊಂದು ವಿಶೇಷ ಅಂಶವೆಂದರೆ, ಟ್ರಾವಿಸ್ ಹೆಡ್ ಅಡಿಲೇಡ್ನಲ್ಲಿ ಸತತ ನಾಲ್ಕನೇ ಟೆಸ್ಟ್ ಶತಕ ಬಾರಿಸುವ ಮೂಲಕ ದಿಗ್ಗಜರಾದ ಡಾನ್ ಬ್ರಾಡ್ಮನ್, ಮೈಕೆಲ್ ಕ್ಲಾರ್ಕ್ ಮತ್ತು ಸ್ಟೀವ್ ಸ್ಮಿತ್ ಅವರ ಆಸ್ಟ್ರೇಲಿಯಾ ದಾಖಲೆಗಳನ್ನು ಸರಿಗಟ್ಟಿದ್ದಾರೆ.
ಇದನ್ನು ಓದಿ : ಬಲ್ಕರ್ ಹಾಗೂ ಬೊಲೆರೋ ನಡುವೆ ಡೆಡ್ಲಿ ಆಕ್ಸಿಡೆಂಟ್

ನಾಲ್ಕು ಸತತ ಶತಕ
ಡಾನ್ ಬ್ರಾಡ್ಮನ್ ಎಂಸಿಜಿ ಮತ್ತು ಹೆಡಿಂಗ್ಲಿಯಲ್ಲಿ ತಲಾ ನಾಲ್ಕು ಸತತ ಶತಕಗಳನ್ನು ಬಾರಿಸಿದ್ದರು. ಮೈಕೆಲ್ ಕ್ಲಾರ್ಕ್ ಅಡಿಲೇಡ್ನಲ್ಲಿ ನಾಲ್ಕು ಶತಕಗಳನ್ನು ದಾಖಲಿಸಿದ್ದರು.
ಸ್ಟೀವ್ ಸ್ಮಿತ್ ಎಂಸಿಜಿಯಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ್ದರು. ಇದೀಗ ಟ್ರಾವಿಸ್ ಹೆಡ್ 2022ರಿಂದ 2025ರ ನಡುವಿನ ಅವಧಿಯಲ್ಲಿ ಅಡಿಲೇಡ್ನಲ್ಲಿ ನಾಲ್ಕು ಟೆಸ್ಟ್ ಶತಕಗಳನ್ನು ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ.
196 ಎಸೆತಗಳಲ್ಲಿ 142 ರನ್
ಮೂರನೇ ದಿನದಾಟದ ಅಂತ್ಯಕ್ಕೆ ಟ್ರಾವಿಸ್ ಹೆಡ್ 196 ಎಸೆತಗಳಲ್ಲಿ 142 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಅವರು ತಮ್ಮ ಇನ್ನಿಂಗ್ಸ್ ಅನ್ನು ಇನ್ನಷ್ಟು ವಿಸ್ತರಿಸುವ ನಿರೀಕ್ಷೆಯಿದ್ದು, ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವ ಅವಕಾಶವೂ ಅವರ ಮುಂದೆ ಇದೆ.

ಇದನ್ನು ನೋಡಿ : ನನ್ನ, ಸಿದ್ದರಾಮಯ್ಯ ಮಧ್ಯೆ ಒಪ್ಪಂದ ನಡೆದಿದೆ, ನಾವಿಬ್ಬರೂ ಮಾತನಾಡಿದ್ದೇವೆ: ಡಿಕೆಶಿ




