LIC ಪಾಲಿಸಿ ಹಣಕ್ಕಾಗಿ ಸ್ವಂತ ತಮ್ಮನನ್ನೇ ಕೊಲೆ ಮಾಡಿದ ಅಣ್ಣ!

ಕಲಿಗಾಲದಲ್ಲಿ ಮನುಷ್ಯನಿಗೆ ಸಂಬಂಧಗಳಿಗಿಂತ ದುಡ್ಡೇ ದೊಡ್ಡದಾಗಿಬಿಟ್ಟಿದೆ. ಕಾಂಚಾಣಾದ ಹಪಾಹಪಿಗೆ ಬಿದ್ದ ಕ್ರೂರಿಯೊಬ್ಬ, ರಕ್ತ ಸಂಬಂಧವನ್ನೇ ಮರೆತು ಒಡಹುಟ್ಟಿದ ಸಹೋದರನನ್ನೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಇನ್ಶೂರೆನ್ಸ್ ಹಣದ ಆಸೆಗೆ ಬಿದ್ದ ನರಹಂತಕ, ಅಪಘಾತದ ರೂಪದಲ್ಲಿ ಹೈಟೆಕ್ ಮರ್ಡರ್ ಮಿಸ್ಟರಿಯನ್ನೇ ಸೃಷ್ಟಿಸಿದ್ದ. ಆದರೆ, ತನಿಖೆಗಿಳಿದ ಖಾಕಿ ಪಡೆ ಕೇವಲ ಹನ್ನೆರಡು ಗಂಟೆಯೊಳಗೆ ಹತ್ಯಾಕಾಂಡದ ಅಸಲಿ ಮುಖವಾಡವನ್ನ ಕಳಚಿ ಹಾಕಿದ್ದಾರೆ.
ಅಪಘಾತವೆಂಬಂತೆ ಬಿಂಬಿಸಲು ಹಂತಕರ ಮಾಸ್ಟರ್ ಪ್ಲಾನ್
ಅಮಾಯಕ ತಮ್ಮನ ಪ್ರಾಣವನ್ನೇ ಮುಗಿಸಿ ಹಣದ ಮೇಲೆ ತೇಲಾಡಲು ಹೋದ ಪಾಪಿ ಅಣ್ಣನೊಬ್ಬ ಈಗ ಸಲಾಕಿಯ ಹಿಂದೆ ನಿಂತಿದ್ದಾನೆ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಮಡಕಶಿರಾ ತಾಲೂಕಿನ ನಿದ್ರಗಟ್ಟ ಗ್ರಾಮದ 35 ವರ್ಷದ ರಮೇಶ್ ಹತ್ಯೆಯಾದ ದುರ್ದೈವಿ. ಸ್ವಂತ ಅಣ್ಣ ಹನುಮಂತರಾಜುನೇ ಈ ಕೃತ್ಯದ ಮಾಸ್ಟರ್ ಮೈಂಡ್. ಕಳೆದ ಎರಡು ವರ್ಷಗಳ ಹಿಂದೆಯೇ ತಮ್ಮನ ಹೆಸರಲ್ಲಿ 15 ಲಕ್ಷ ರೂಪಾಯಿಯ ಎಲ್ ಐಸಿ ಪಾಲಿಸಿ ಮಾಡಿಸಿದ್ದ ಹನುಮಂತರಾಜು, ಅಪಘಾತವಾದರೆ ಡಬಲ್ ದುಡ್ಡು ಸಿಗುತ್ತೆ ಅನ್ನೋ ದುರುದ್ದೇಶದಿಂದ ಬರೋಬ್ಬರಿ 85 ಸಾವಿರ ರೂಪಾಯಿ ನೀಡಿ ಈ ಕೊಲೆಗೆ ಸ್ಕೆಚ್ ಹಾಕಿದ್ದ. ಮೃತ ರಮೇಶ್ ಬ್ಲಾಕ್ ಮ್ಯಾಜಿಕ್ ಹಾಗೂ ಮಾಟ ಮಂತ್ರ ತಂತ್ರವಿದ್ಯೆಗಳಲ್ಲಿ ತೊಡಗಿಸಿಕೊಂಡಿದ್ದು, ಇದರಿಂದ ಬೇಸತ್ತಿದ್ದ ಹನುಮಂತರಾಜು ಇದನ್ನೇ ಬಂಡವಾಳ ಮಾಡಿಕೊಂಡಿದ್ದ.
ಇದನ್ನು ಓದಿ : ಮನೆಯಲ್ಲಿ ಮಲಗಿದ್ದ ಯುವಕನ ಭೀಕರ ಕೊಲೆ!

ದೊಣ್ಣೆಯಿಂದ ಮರ್ಮಾಂಗಕ್ಕೆ ಹೊಡೆದು ಕ್ರೂರತೆ ಮೆರೆದ ಪಾಪಿಗಳು
ಕಳೆದ ಜೂನ್ 19 ರಂದು ಶಿರಾ ಬಳಿ ನಿಧಿ ಇದೆ, ಪೂಜೆ ಮಾಡೋಕೆ ಬಾ ಎಂದು ನಂಬಿಸಿ ಕರೆಸಿಕೊಂಡಿದ್ದ ಹನುಮಂತರಾಜು ಮತ್ತು ಆತನ ಸಹಚರರು, ಶಿರಾ ಮತ್ತು ಅಮರಾಪುರ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ಅಲ್ಲಿ ತಡರಾತ್ರಿ ತಮ್ಮನ ಮೇಲೆ ಕಿರಾತಕರು ಮುಗಿಬಿದ್ದಿದ್ದು, ಮೊದಲು ದೊಣ್ಣೆಯಿಂದ ಮರ್ಮಾಂಗಕ್ಕೆ ಹೊಡೆದಿದ್ದಾರೆ. ಅಷ್ಟಕ್ಕೇ ನಿಲ್ಲದೆ ಕ್ರೂರತ್ವ ಮೆರೆದ ಪಾಪಿಗಳು, ರಮೇಶನ ಮೇಲೆ ನಾಲ್ಕೈದು ಬಾರಿ ಕಾರನ್ನ ಹತ್ತಿಸಿ ವಿಕೃತಿ ಮೆರೆದಿದ್ದಾರೆ. ಇಷ್ಟೆಲ್ಲಾ ಭೀಕರ ಹಲ್ಲೆ ನಡೆಸಿದ್ರೂ ರಮೇಶ್ ಉಸಿರಾಡುತ್ತಿದ್ದಿದ್ದನ್ನ ಕಂಡು ಗಾಬರಿಯಾದ ಹಂತಕರು, ಕೊನೆಗೆ ಬ್ಯಾಟರಿಯ ಜಂಪ್ ವೈಯರ್ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದಾರೆ.
ಹತ್ಯೆ ಮಾಡಿದ್ದ ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟಿದ ಖಾಕಿ
ಇನ್ನು ಹತ್ಯೆಯ ನಂತರ ಇದೊಂದು ರೋಡ್ ಆಕ್ಸಿಡೆಂಟ್ ಎಂದು ಬಿಂಬಿಸಲು ಹಂತಕರು ಹೈಟೆಕ್ ಪ್ಲಾನ್ ಮಾಡಿದ್ದರು. ಕೊಲೆ ನಡೆದ ಸ್ಥಳದಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿ ರಸ್ತೆ ಬದಿಯಲ್ಲಿ ಬೈಕ್ ಬಿಸಾಡಿದ್ದರು. ಅದರ ಪಕ್ಕದಲ್ಲೇ ರಮೇಶನ ಮೃತ ದೇಹವನ್ನ ಎಸೆದು ಪರಾರಿಯಾಗಿದ್ರು. ವಿಷಯ ತಿಳಿದು ಘಟನಾ ಸ್ಥಳಕ್ಕೆ ಶಿರಾ ಡಿವೈಎಸ್ಪಿ dಟಿ ನೀಡಿದಾಗ ಅಲ್ಲಿನ ಸ್ಥಿತಿ ನೋಡಿ ಅನುಮಾನ ಮೂಡಿತ್ತು. ಏಕೆಂದರೆ ಅಲ್ಲಿ ಬೈಕ್ ಅಪಘಾತ ನಡೆದಿದ್ದಕ್ಕೆ ಯಾವುದೇ ರೀತಿಯ ಸಾಕ್ಷಿ ಅಥವಾ ಕುರುಹುಗಳಿರಲಿಲ್ಲ. ಇದು ಸಾದಾ ಅಪಘಾತವಲ್ಲ, ಇದರ ಹಿಂದೆ ದೊಡ್ಡ ಕ್ರೈಂ ನೆರಳು ಅಡಗಿದೆ ಎಂಬುದು ಪೊಲೀಸರಿಗೆ ಕನ್ಫರ್ಮ್ ಆಗಿತ್ತು.. ತಕ್ಷಣ ಅಲರ್ಟ್ ಆದ ಪಟ್ಟನಾಯಕನಹಳ್ಳಿ ಪೊಲೀಸರು ತನಿಖೆಯನ್ನ ತೀವ್ರಗೊಳಿಸಿದರು., ಘಟನೆ ನಡೆದ ಕೇವಲ 12 ಗಂಟೆಯೊಳಗೆ ಹಂತಕ ಅಣ್ಣ ಹನುಮಂತರಾಜು ಸೇರಿದಂತೆ ಕೃತ್ಯಕ್ಕೆ ಸಾಥ್ ನೀಡಿದ್ದ ಲಕ್ಷ್ಮೀಕಾಂತ, ನವೀನ್ ಕುಮಾರ್ ಹಾಗೂ ಎಂಡಿ ಜಿಲಾನ್ ಎಂಬ ನಾಲ್ವರು ಆರೋಪಿಗಳನ್ನ ಹೆಡೆಮುರಿ ಕಟ್ಟಿ ಕಂಬಿ ಹಿಂದೆ ತಳ್ಳಿದ್ದಾರೆ.

ಕೊಲೆ ನಡೆದ 12 ಗಂಟೆಯಲ್ಲೇ ಪ್ರಕರಣ ಭೇದಿಸಿದ ಪೊಲೀಸರು
ಒಟ್ಟಾರೆ ಹಣದ ಆಸೆಗೆ ಬಿದ್ದು ಸ್ವಂತ ತಮ್ಮನನ್ನೇ ಬಲಿಪಡೆದ ಪಾಪಿಗಳ ಅಸಲಿ ಮುಖವಾಡ ಈಗ ಕಳಚಿಕೊಂಡಿದೆ. ಪ್ರಕರಣವನ್ನ ಚಾಲೆಂಜಾಗಿ ತೆಗೆದುಕೊಂಡ ಶಿರಾ ಉಪವಿಭಾಗದ ಪೊಲೀಸರು ಕೇವಲ 12ಗಂಟೆಗಳಲ್ಲಿ ಕಿಲ್ಲರ್ಸ್ ಗಳನ್ನ ಎಡಮುರಿ ಕಟ್ಟಿದ್ದಾರೆ.
ಇದನ್ನು ನೋಡಿ : ಜೂ.27 ರಂದು ಅದ್ಧೂರಿ ಕೆಂಪೇಗೌಡರ ಜಯಂತಿ ಹೇಗಿರುತ್ತೆ ಪ್ರೋಗ್ರಾಂ ಯಾರ್ ಯಾರ್ ಬರ್ತಾರೆ?





