Shivamogga : ಸುತ್ತುಕೋಟೆ ಮನೆಯಲ್ಲಿ ಮಲಗಿದ್ದ ಯುವಕನ ಕೊಲೆ

Shivamogga ಜಿಲ್ಲೆಯ ಸುತ್ತುಕೋಟೆ ಗ್ರಾಮದಲ್ಲಿ ಯುವಕನೋರ್ವನನ್ನು ಆತನ ಮನೆಯಲ್ಲಿಯೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ಯುವಕನನ್ನು ಸುತ್ತುಕೋಟೆ ಗ್ರಾಮದ ನಿವಾಸಿ 29 ವರ್ಷದ ಪ್ರವೀಣ್ ಎಂದು ಗುರುತಿಸಲಾಗಿದೆ. ಪ್ರವೀಣ್ ಗಾರೆ ಕೆಲಸ ಮಾಡುವುದರ ಜೊತೆಗೆ ಟ್ರಾಕ್ಟರ್ ಬಾಡಿಗೆ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ರಾತ್ರಿ ಮಲಗಿದ್ದ ವೇಳೆ ಕೃತ್ಯ
ನಿನ್ನೆ ರಾತ್ರಿ ಬಾಡಿಗೆ ಮನೆಯಿಂದ ಊಟ ಮುಗಿಸಿ ತನ್ನ ಮನೆಯಲ್ಲಿ ಮಲಗಿದ್ದ ವೇಳೆ ಈ ಕೃತ್ಯ ನಡೆದಿದೆ. ತಲೆ ಭಾಗದಲ್ಲಿ ಮಾರಕಾಸ್ತ್ರದಿಂದ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇಂದು ಬೆಳಗ್ಗೆ ಕೆಲಸಕ್ಕೆ ಬರುವಂತೆ ಪ್ರವೀಣ್ ಕೆಲ ಯುವಕರಿಗೆ ಮುಂಚಿತವಾಗಿ ತಿಳಿಸಿದ್ದರು. ಆದರೆ ಬೆಳಗ್ಗೆಯಿಂದ ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡ ಯುವಕರು ಮನೆಗೆ ತೆರಳಿದಾಗ ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿದೆ.
ಇದನ್ನು ಓದಿ : ತೋಟಕ್ಕೆ ವಾಕಿಂಗ್ಗೆ ತೆರಳಿದ್ದ ವೃದ್ಧೆಯ ಭೀಕರ ಕೊಲೆ..!!

ವ್ಯಾವಹಾರಿಕ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ?
ಘಟನೆ ಕುರಿತು ಮಾಹಿತಿ ಪಡೆದ ಕುಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವ್ಯಾವಹಾರಿಕ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
ಆರೋಪಿಗಳ ಪತ್ತೆಗೆ ಬಲೆ
ಇನ್ನು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನು ನೋಡಿ : ಯಮನಂತೆ ನುಗ್ಗಿದ BMTC BUS – ಸ್ಥಳದಲ್ಲೇ ದಂಪತಿ, ಮಗು ದಾರುಣ ಸಾ*




