Bengaluru : ಗಗನಕ್ಕೇರುತ್ತಿದೆ ತರಕಾರಿ ದರ: ನೂರರ ಗಡಿ ದಾಟಿದ ಬೀನ್ಸ್, ಬದನೆಕಾಯಿ

ರಾಜ್ಯದಲ್ಲಿ ಅನಾವೃಷ್ಟಿ ಹಾಗೂ ನೆರೆಯ ರಾಜ್ಯಗಳ ಹವಾಮಾನ ವೈಪರೀತ್ಯದ ಪರಿಣಾಮ ಬೆಂಗಳೂರಿನ (Bengaluru) ತರಕಾರಿ ಮಾರುಕಟ್ಟೆಯಲ್ಲಿ ಬೆಲೆಗಳು ಗಗನಕ್ಕೇರಿವೆ. ಕೆಆರ್ ಮಾರ್ಕೆಟ್ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಹಲವು ತರಕಾರಿಗಳ ಬೆಲೆ ನೂರು ರೂಪಾಯಿ ಗಡಿ ದಾಟಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ.

ನೂರರ ಗಡಿ ದಾಟಿದ ಬೀನ್ಸ್
ನುಗ್ಗೆಕಾಯಿ ಕೆಜಿಗೆ 200 ರಿಂದ 220 ರೂಪಾಯಿ, ಬೀನ್ಸ್ 115 ರಿಂದ 140 ರೂಪಾಯಿ, ಮೆಂತ್ಯ ಸೊಪ್ಪು 120 ರಿಂದ 130 ರೂಪಾಯಿ ಹಾಗೂ ಬಿಳಿ ಬದನೆಕಾಯಿ 110 ರಿಂದ 120 ರೂಪಾಯಿಗೆ ಮಾರಾಟವಾಗುತ್ತಿದೆ. ಬಟಾಣಿ ಮತ್ತು ಹಸಿಮೆಣಸಿನಕಾಯಿ ದರವೂ 100 ರೂಪಾಯಿ ಗಡಿ ದಾಟಿದೆ.

ತರಕಾರಿ ದರಗಳು (ಪ್ರತಿ ಕೆಜಿ)
- ನುಗ್ಗೆಕಾಯಿ – ₹200 ರಿಂದ ₹220
- ಬೀನ್ಸ್ – ₹115 ರಿಂದ ₹140
- ಮೆಂತ್ಯ ಸೊಪ್ಪು – ₹120 ರಿಂದ ₹130
- ಬಿಳಿ ಬದನೆಕಾಯಿ – ₹110 ರಿಂದ ₹120
- ಬಟಾಣಿ/ಹಸಿಮೆಣಸು – ₹100 ರಿಂದ ₹120
- ಕ್ಯಾಪ್ಸಿಕಂ/ಕ್ಯಾರೆಟ್ – ₹80 ರಿಂದ ₹100
- ಬೆಳ್ಳುಳ್ಳಿ – ₹200 ರಿಂದ ₹220

ಕೆಂಪು ಸುಂದರಿ ದರ ಇಳಿಕೆ
ಆದರೆ ಬೆಲೆ ಏರಿಕೆಯ ನಡುವೆ ಟೊಮೆಟೊ ಹಾಗೂ ಈರುಳ್ಳಿ ದರ ಮಾತ್ರ ಇಳಿಕೆಯಾಗಿದೆ. ಟೊಮೆಟೊ ಚಿಲ್ಲರೆ ಮಾರುಕಟ್ಟೆಯಲ್ಲಿ 15 ರಿಂದ 20 ರೂಪಾಯಿಗೆ ಹಾಗೂ ಈರುಳ್ಳಿ 20 ರಿಂದ 25 ರೂಪಾಯಿಗೆ ಲಭ್ಯವಾಗುತ್ತಿದೆ.
ಇದನ್ನು ಓದಿ : Vegetables Price – ಗಗನಕ್ಕೇರಿದ ತರಕಾರಿ ಬೆಲೆ

ಮೊಟ್ಟೆ ಪ್ರಿಯರಿಗೂ ಶಾಕ್
ಮತ್ತೊಂದೆಡೆ ಮೊಟ್ಟೆ ಪ್ರಿಯರಿಗೂ ಶಾಕ್ ಎದುರಾಗಿದ್ದು, ಈ ಹಿಂದೆ 6 ರೂಪಾಯಿ 50 ಪೈಸೆ ಇದ್ದ ಒಂದು ಮೊಟ್ಟೆಯ ಬೆಲೆ ಈಗ 8 ರೂಪಾಯಿಗೆ ಏರಿಕೆಯಾಗಿದೆ.

ನೂರರ ಗಡಿ ದಾಟಿದ ಬದನೆಕಾಯಿ
ದೇಶದ ಹಲವು ಭಾಗಗಳಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ಹಾನಿಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಬಿಳಿ ಬದನೆಕಾಯಿ 100 ರೂಪಾಯಿ ಗಡಿ ದಾಟಿದ್ದು, ಗ್ರಾಹಕರ ಆತಂಕ ಹೆಚ್ಚಿಸಿದೆ.

ದೇಶದ ಹಲವೆಡೆ ಅತಿವೃಷ್ಟಿಯಿಂದ ಬೆಳೆಗಳು ಕೊಳೆತು ಹೋಗಿದ್ದರೆ, ಇನ್ನು ಕೆಲವು ಭಾಗಗಳಲ್ಲಿ ಸಕಾಲಕ್ಕೆ ಮಳೆಯಾಗದೆ ಬೆಳೆ ಒಣಗುತ್ತಿರುವುದು ಈ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಬೆಲೆ ದುಬಾರಿಯಾಗಿರುವುದರಿಂದ ಗ್ರಾಹಕರು ಈಗ ಕಿಲೋ ಗಟ್ಟಲೆ ತರಕಾರಿ ಕೊಳ್ಳುವುದನ್ನು ಬಿಟ್ಟು, ಕಾಲು ಕೆಜಿ ಅಥವಾ ಅರ್ಧ ಕೆಜಿಗೆ ತೃಪ್ತಿಪಡುತ್ತಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಕ್ಷೀಣಿಸುತ್ತಿದ್ದು, ವ್ಯಾಪಾರಿಗಳು ಕೂಡ ಕಂಗೆಟ್ಟಿದ್ದಾರೆ.

ಇದನ್ನು ನೋಡಿ : ತುಮಕೂರಿನಲ್ಲಿ ಜೋರಾಗ್ತಿದೆ POSTER WAR ̲ ಕುಂಬಳಕಾಯಿ ಕಳ್ಳ ಅಂದ್ರೆ ಯಾಕೆ ಮುಟ್ಟಿನೋಡಿಕೊಳ್ಳಬೇಕು?




