ಮಾಜಿ CM ಯಡಿಯೂರಪ್ಪಗೆ ರಿಲೀಫ್ : ಪೋಕ್ಸೋ ಕೇಸ್ ನಲ್ಲಿ ಜಾಮೀನು ಷರತ್ತು ಸಡಿಲಿಸಿದ ಹೈಕೋರ್ಟ್

ಮಾಜಿ CM ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಪೋಕ್ಸೋ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಜಾಮೀನಿಗೆ ವಿಧಿಸಲಾಗಿದ್ದ ಪ್ರಮುಖ ಷರತ್ತನ್ನು ಸಡಿಲಗೊಳಿಸಿದೆ.
ಕೋರ್ಟ್ ವ್ಯಾಪ್ತಿ ಬಿಟ್ಟು ಹೋಗದಂತೆ ಇತ್ತು ಷರತ್ತು
ಈ ಹಿಂದೆ ಯಡಿಯೂರಪ್ಪ ಅವರಿಗೆ ಜಾಮೀನು ಮಂಜೂರು ಮಾಡುವ ವೇಳೆ, ನ್ಯಾಯಾಲಯದ ಅಥವಾ ತನಿಖಾ ಸಂಸ್ಥೆಯ ಪೂರ್ವ ಅನುಮತಿ ಇಲ್ಲದೆ ನಿಗದಿತ ವ್ಯಾಪ್ತಿಯನ್ನು ಬಿಟ್ಟು ಹೊರಗೆ ತೆರಳಬಾರದು ಎಂಬ ನಿಯಮವಿತ್ತು. ಇದರಿಂದ ಅವರ ರಾಜಕೀಯ ಹಾಗೂ ವೈಯಕ್ತಿಕ ಪ್ರವಾಸಗಳಿಗೆ ನಿರ್ಬಂಧ ಉಂಟಾಗಿತ್ತು.
ಇದನ್ನು ಓದಿ : POCSO CASE – BSY ಗೆ ಸುಪ್ರೀಂನಿಂದ ಬಿಗ್ ರಿಲೀಫ್

ಸುಪ್ರೀಂಕೋರ್ಟ್ ತಡೆಯಾಜ್ಞೆ ಉಲ್ಲೇಖಿಸಿದ ವಕೀಲರು
ಅರ್ಜಿಯ ವಿಚಾರಣೆ ವೇಳೆ ಯಡಿಯೂರಪ್ಪ ಪರ ವಕೀಲರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈಗಾಗಲೇ ತಾತ್ಕಾಲಿಕ ತಡೆಯಾಜ್ಞೆ ನೀಡಿರುವುದನ್ನು ಉಲ್ಲೇಖಿಸಿ, ವಿಚಾರಣೆಗಳು ಸ್ಥಗಿತಗೊಂಡಿರುವ ಕಾರಣದಿಂದ ಕಠಿಣ ಷರತ್ತು ಮುಂದುವರಿಸುವ ಅಗತ್ಯವಿಲ್ಲ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
ಮಾಜಿ CM ಅನುಮತಿ ಇಲ್ಲದೆ ವ್ಯಾಪ್ತಿ ಬಿಟ್ಟು ತೆರಳಬಾರದು
ಯಡಿಯೂರಪ್ಪ ಅವರ ಪರ ವಕೀಲರ ವಾದವನ್ನು ಆಲಿಸಿದ ಹೈಕೋರ್ಟ್, ಸುಪ್ರೀಂಕೋರ್ಟ್ನ ತಡೆಯಾಜ್ಞೆ ಆದೇಶವನ್ನು ಗಣನೆಗೆ ತೆಗೆದುಕೊಂಡಿತು. ವಿಚಾರಣೆಗಳು ಸದ್ಯಕ್ಕೆ ನಿಂತಿರುವುದರಿಂದ ಆರೋಪಿಗೆ ಓಡಾಟದ ಸ್ವಾತಂತ್ರ್ಯ ನೀಡಬಹುದು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, “ಅನುಮತಿ ಇಲ್ಲದೆ ವ್ಯಾಪ್ತಿ ಬಿಟ್ಟು ತೆರಳಬಾರದು” ಎಂಬ ಜಾಮೀನು ಷರತ್ತನ್ನು ಸಡಿಲಗೊಳಿಸಿ ಅಧಿಕೃತ ಆದೇಶ ಹೊರಡಿಸಿತು.

ಮಾಜಿ CM ಯಡಿಯೂರಪ್ಪಗೆ ನಿರಾಳತೆ
ಈ ಆದೇಶದಿಂದ ಯಡಿಯೂರಪ್ಪ ಅವರಿಗೆ ದೊಡ್ಡ ಕಾನೂನು ಪರಿಹಾರ ಸಿಕ್ಕಂತಾಗಿದ್ದು, ಈಗ ಅವರು ಮುಕ್ತವಾಗಿ ರಾಜ್ಯ ಮತ್ತು ಹೊರರಾಜ್ಯ ಪ್ರವಾಸ ಕೈಗೊಳ್ಳಲು ಅವಕಾಶ ದೊರಕಿದೆ. ಜೊತೆಗೆ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಹಾದಿ ಸುಗಮವಾಗಿದೆ.

ಇದನ್ನು ನೋಡಿ : ರಾಜೀವ್ ಗೌಡನ ಮತ್ತೊಂದು ಧಮ್ಕಿ ಪುರಾಣ – ಜಮೀನು ಮಾರಿದ ಬಾಕಿ ಹಣ ಕೊಡದೇ ಬೆದರಿಕೆ




