Bengaluru : ಬಡವರ ಅಕ್ಕಿ ಲೂಟಿ – ಲೋಕಾಯುಕ್ತ ಪೊಲೀಸರಿಂದ ಏಕಕಾಲಕ್ಕೆ 22 ಕಡೆ ದಾಳಿ.!

ಬಡವರ ಹೊಟ್ಟೆ ತುಂಬಿಸಬೇಕಿದ್ದ ಸರ್ಕಾರದ ಅಕ್ಕಿಯನ್ನೇ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಿರುವ ಗಂಭೀರ ಆರೋಪ Bengaluru ನಗರದಲ್ಲಿ ಬೆಳಕಿಗೆ ಬಂದಿದೆ. ಅಕ್ರಮವಾಗಿ ಅಕ್ಕಿ ಸಾಗಾಟದ ಕುರಿತು ಮಾಹಿತಿ ಸಿಕ್ಕ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಯಶವಂತಪುರದಲ್ಲಿರುವ ಗೋದಾಮಿನಲ್ಲಿ ಭಾರಿ ಪ್ರಮಾಣದ ಅಕ್ಕಿ ಪತ್ತೆಯಾಗಿದೆ.

240 ಕ್ವಿಂಟಾಲ್ ಅಕ್ಕಿ ಮೂಟೆಗಳು ಪತ್ತೆ
ಇನ್ನು ದಾಳಿಯಲ್ಲಿ ಯಶವಂತಪುರದ ಗೋದಾಮಿನಲ್ಲಿ ಒಟ್ಟು 240 ಕ್ವಿಂಟಾಲ್ ಅಕ್ಕಿ ಮೂಟೆಗಳು ಪತ್ತೆಯಾಗಿದ್ದು, ಅರ್ಹ ಫಲಾನುಭವಿಗಳಿಗೆ ತಲುಪಬೇಕಿದ್ದ ಅಕ್ಕಿಯನ್ನು ಬಿಲ್ ಇಲ್ಲದೆ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಗೋದಾಮಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ನೇತೃತ್ವದ ತಂಡ, ಗೋದಾಮಿನಲ್ಲಿದ್ದ ಅಕ್ಕಿ ಮೂಟೆಗಳ ಲೆಕ್ಕಪತ್ರಗಳನ್ನು ಸಮಗ್ರವಾಗಿ ಪರಿಶೀಲಿಸಿದೆ.
ಇದನ್ನು ಓದಿ : ಹೈವೇ ಡಾಬಾಗಳ ಮೇಲೆ ಫುಡ್ ಸೇಫ್ಟಿ ಅಧಿಕಾರಿಗಳ ದಾಳಿ..!

76 ಅಕ್ಕಿ ಮೂಟೆಗಳನ್ನು ಜಪ್ತಿ
ಇನ್ನು ಈಗಾಗಲೇ ಅಕ್ಕಿ ಸಾಗಾಟಕ್ಕೆ ಬಳಸಲಾಗಿದ್ದ ಎರಡು ಖಾಸಗಿ ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, 76 ಅಕ್ಕಿ ಮೂಟೆಗಳನ್ನು ಜಪ್ತಿ ಮಾಡಿದ್ದಾರೆ. ಅಲ್ದೇ ಗೋದಾಮಿನ ಜವಾಬ್ದಾರಿ ಹೊತ್ತಿದ್ದ ಇಬ್ಬರು ಅಧಿಕಾರಿಗಳು ಹಾಗೂ ಲಾರಿ ಚಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಉಳಿದ ಸುಮಾರು 100 ಕ್ವಿಂಟಾಲ್ ಅಕ್ಕಿಯನ್ನೂ ಖಾಸಗಿ ವಲಯಕ್ಕೆ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.

22 ಗೋದಾಮುಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ
ಇನ್ನು ಈ ಪ್ರಕರಣದ ಬೆನ್ನಲ್ಲೇ ನಗರದ ವಿವಿಧ ಭಾಗಗಳಲ್ಲಿರುವ 22 ಗೋದಾಮುಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಒಟ್ನಲ್ಲಿ ಬಡವರ ಪಾಲಿಗೆ ಸೇರಬೇಕಿದ್ದ ಆಹಾರ ಧಾನ್ಯಗಳನ್ನೇ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಿರುವ ಆರೋಪ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಅಕ್ರಮದ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಇದನ್ನು ನೋಡಿ : ಇದು ಪ್ರತಿಷ್ಟಿತ VARIN SCHOOLನ ಕರ್ಮಕಾಂಡ- ಮಕ್ಕಳನ್ನ SCHOOLಗೆ ಸೇರಿಸೋ ಮುನ್ನ ಹುಷಾರ್.!




