Bengaluru Highway : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪ ಎಸ್ಟಿಆರ್ ಹೈವೇನಲ್ಲಿ ಟೈರ್ ಬ್ಲಾಸ್ಟ್ನಿಂದ ಲಾರಿ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಹಾಗೂ ಬೊಲೆರೋ ಪಿಕಪ್ಗೆ ಡಿಕ್ಕಿ ಹೊಡೆದಿದೆ.

Bengaluru Highway: ಬೆಂಗಳೂರು ಹೊರವಲಯದ ಎಸ್ಟಿಆರ್ (SRT) ಹೈವೇನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅದರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಲಕ್ಷ್ಮೀಪುರ ಗೇಟ್ ಸಮೀಪ ನಡೆದ ಈ ಘಟನೆಯಲ್ಲಿ, ಟೈರ್ ಬ್ಲಾಸ್ಟ್ನಿಂದ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಹೆದ್ದಾರಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ನುಗ್ಗಿದೆ.

ಮೊದಲು ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಇಟ್ಟಿಗೆಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿವೆ. ಬಳಿಕ ಎದುರಿನಿಂದ ಬರುತ್ತಿದ್ದ ಬೊಲೆರೋ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ವಾಹನ ಗಾಳಿಯಲ್ಲಿ ಮೇಲಕ್ಕೆ ಹಾರಿ ರಸ್ತೆ ಬದಿಯ ಜಮೀನಿಗೆ ಬಿದ್ದಿದೆ. ಅದರಲ್ಲಿದ್ದ ಕ್ರೇಟ್ಗಳೂ ಸುತ್ತಮುತ್ತ ಹರಡಿಕೊಂಡಿವೆ.

ಅಪಘಾತದ ತೀವ್ರತೆ ಭಯಾನಕವಾಗಿದ್ದರೂ, ಅದೃಷ್ಟವಶಾತ್ ವಾಹನ ಚಾಲಕರಿಗೆ ಸಣ್ಣಪುಟ್ಟ ಗಾಯಗಳಷ್ಟೇ ಆಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣದ ಬಗ್ಗೆ ತನಿಖೆ ಮುಂದುವರಿದಿದೆ.




