Bengaluru : ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿ ಗ್ರಾಮದಲ್ಲಿ ಮೊದಲ ಮಹಡಿಯಿಂದ ಬಿದ್ದು 2 ವರ್ಷದ ಮಗು ಮೃತಪಟ್ಟಿದೆ..

ರಾಜಧಾನಿ Bengaluru ನಲ್ಲಿ ಮನಕಲಕುವ ಘಟನೆ ಸಂಭವಿಸಿದೆ. ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿ ಗ್ರಾಮದಲ್ಲಿ ಮೊದಲ ಮಹಡಿಯಿಂದ ಬಿದ್ದು ಎರಡು ವರ್ಷದ ಮಗು ದಾರುಣವಾಗಿ ಮೃತಪಟ್ಟಿದೆ. ಮೃತ ಮಗುವನ್ನು ದೀಕ್ಷಿತ್ (2) ಎಂದು ಗುರುತಿಸಲಾಗಿದ್ದು, ಆತ ಟಿ. ದಾಸರಹಳ್ಳಿ ನಿವಾಸಿಗಳಾದ ನವೀನ್ ಕುಮಾರ್ ಮತ್ತು ಕಾವ್ಯ ದಂಪತಿಯ ಪುತ್ರನಾಗಿದ್ದಾನೆ.
ಮಾಹಿತಿಯ ಪ್ರಕಾರ, ನವೀನ್ ಕುಮಾರ್ ಮತ್ತು ಕಾವ್ಯ ದಂಪತಿ ಎರಡು ದಿನಗಳ ಹಿಂದಷ್ಟೇ ತೋಟದಗುಡ್ಡದಹಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಆಟವಾಡುತ್ತಿದ್ದ ದೀಕ್ಷಿತ್ ಮೆಟ್ಟಿಲಿನ ಮೇಲ್ಭಾಗದಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಗುವನ್ನು ಪೋಷಕರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.
MUST READ : Guru Pushya Mahayoga : ಈ 6 ರಾಶಿಗಳಿಗೆ ಅದೃಷ್ಟ, ಧನಲಾಭ ಮತ್ತು ಯಶಸ್ಸಿನ ಸುರಿಮಳೆ..!!

ಸುಮಾರು 24 ಗಂಟೆಗಳ ಕಾಲ ಮಗು ಕೋಮಾದಲ್ಲಿದ್ದು, ವೈದ್ಯರು ಸಾಕಷ್ಟು ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ. ಮಗುವಿನ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಸಂಬಂಧಿಕರು ಮತ್ತು ಗ್ರಾಮಸ್ಥರಲ್ಲೂ ದುಃಖ ಮನೆ ಮಾಡಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಶವಾಗಾರಕ್ಕೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ದುರಂತವು ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.
MUST WATCH : ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು – HIGHWAY ತಡೆದು ಅನ್ನದಾತರ ಆಕ್ರೋಶ.! | CHIKKABALLAPURA NEWS |




