
ರಾತ್ರಿ ಸುಮಾರು ಏಳೂವರೆ ಗಂಟೆ ಸುಮಾರಿಗೆ, ಇಬ್ಬರು ಕಳ್ಳರು ಮರ ಹತ್ತಿ ಕಾಯಿ ಕಳವು ಮಾಡುತ್ತಿದ್ದಾಗ, ತೋಟದ ಮಾಲೀಕರ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕು ಕಂದಿಕೆರೆ ಗ್ರಾಮದಲ್ಲಿ ನಡೆದಿದೆ.
ಕೃತ್ಯಕ್ಕೆ ಬಳಸಿದ ಸ್ಕೂಟಿಯೂ ಸೇರಿದಂತೆ ಕಳ್ಳರನ್ನು ಗ್ರಾಮಸ್ಥರು ಹಿಡಿದುಕೊಂಡಿದ್ದು, ಕದ್ದ ಕಾಯಿಗಳನ್ನು ಇದೇ ಗ್ರಾಮದ ರಮೇಶ ಎಂಬುವರಿಗೆ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಹೊರಬಂದಿದೆ. ಗ್ರಾಮಸ್ಥರು ರಮೇಶ ಅವರಿಂದ ಆ ಕಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಬಂಧಿತ ಕಾಯಿ ಕಳ್ಳರನ್ನು ಒಬ್ಬ ಮೋಟಿಹಳ್ಳಿ ಹುಳಿಯಾರು ಹೋಬಳಿ ಶಿವಸ್ವಾಮಿ, ಮತ್ತೊಬ್ಬ ಕೊರಟಗೆರೆ ತಾಲೂಕಿನ ಶ್ರೀಕಾಂತ್ ಎನ್ನಲಾಗಿದೆ. ಕೆಲಸಕ್ಕೆಂದು ಬಂದು ಇಂತಹ ಕೃತ್ಯ ಎಸಗಿದ್ದಾರೆ. ನಂತರ ಕಳ್ಳರನ್ನು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಲಾಯಿತು.
ಈ ಇಬ್ಬರು ಕಳ್ಳರು ಕಳೆದ ಕೆಲವು ತಿಂಗಳಿನಿಂದ ಸುಮಾರು ಎಂಟರಿಂದ ಒಂಬತ್ತು ತೋಟಗಳಲ್ಲಿ ಕಳವು ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.




