Koppal News : “10ನೇ ತರಗತಿಯ ವಿದ್ಯಾರ್ಥಿನಿ ವಸತಿನಿಲಯದಲ್ಲೇ ಹೆರಿಗೆ… 9 ತಿಂಗಳ ಗರ್ಭಧಾರಣೆ ಯಾರಿಗೂ ತಿಳಿಯಲಿಲ್ಲವೇ? ಪೋಕ್ಸೋ ಪ್ರಕರಣ ದಾಖಲು , ವಸತಿನಿಲಯದ ಸಿಬ್ಬಂದಿಯ ನಿರ್ಲಕ್ಷ್ಯ ಬಗ್ಗೆ ಪೋಷಕರ ಆಕ್ರೋಶ.

Koppal News: ಕುಕನೂರು ವಸತಿನಿಲಯದಲ್ಲಿ ಅಪ್ರಾಪ್ತೆಯ ಹೆರಿಗೆ
ಕೊಪ್ಪಳ ಜಿಲ್ಲೆಯ ಕುಕನೂರು ವಸತಿನಿಲಯದಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ದೊಡ್ಡ ಸಂಚಲನ ಉಂಟುಮಾಡಿದೆ. ಹಾಸ್ಟೆಲ್ನಲ್ಲೇ ಅಪ್ರಾಪ್ತೆಯ ಹೆರಿಗೆ ನಡೆದಿದ್ದು, ಸುರಕ್ಷತೆ, ಮೇಲ್ವಿಚಾರಣೆ ಮತ್ತು ನಿರ್ಲಕ್ಷ್ಯ ಕುರಿತ ಗಂಭೀರ ಪ್ರಶ್ನೆಗಳು ರಾಜ್ಯದ ಮಟ್ಟದಲ್ಲಿ ಎದ್ದಿವೆ.
ಅಪ್ರಾಪ್ತೆಯ ಹೆರಿಗೆ ವೈದ್ಯರಿಗೂ, ಸಿಬ್ಬಂದಿಗೂ ಶಾಕ್
10ನೇ ತರಗತಿ ಬಾಲಕಿಯೊಬ್ಬಳು ದಿಢೀರ್ ಹೊಟ್ಟೆನೋವಿನಿಂದ ಬಳಲುತ್ತಿದ್ದಂತೆ,ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಯಿತು.
ತಪಾಸಣೆ ವೇಳೆ ಆಕೆ 9 ತಿಂಗಳ ಗರ್ಭಿಣಿಯಾದುದು ಮಾತ್ರವಲ್ಲ,ಅವಳು ಗಂಡು ಮಗುವಿಗೆ ಜನ್ಮ ನೀಡಿರುವುದು ವೈದ್ಯ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.ಈ ಘಟನೆ ಬೆಳಕಿಗೆ ಬಂದ ಕೂಡಲೇ ಜಿಲ್ಲೆಯಾದ್ಯಂತ ಆಶ್ಚರ್ಯ–ಆಕ್ರೋಶ ಸೃಷ್ಟಿಸಿತು.
ಜಿಲ್ಲಾಡಳಿತ ತುರ್ತು ಕ್ರಮ: ಡಿಸಿ, ಎಸ್ಪಿಯಿಂದ ಆಸ್ಪತ್ರೆಗೆ ಭೇಟಿ
ಘಟನೆಯ ಮಾಹಿತಿ ದೊರಯುತ್ತಿದ್ದಂತೆ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಜಿಲ್ಲಾ ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ ಆಸ್ಪತ್ರೆಗೆ ಭೇಟಿ ನೀಡಿ ಹುಡುಗಿ ಮತ್ತು ಮಗುವಿನ ಆರೋಗ್ಯ ವಿಚಾರಿಸಿದರು.
ಇದರೊಂದಿಗೆ ಕುಕನೂರು ಪೊಲೀಸರು ತಕ್ಷಣ ಆಪರೇಷನ್ ನಡೆಸಿ,ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.ಅವನ ವಿರುದ್ಧ POCSO ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಹಾಸ್ಟೆಲ್ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳು
ತೀವ್ರ ವಾದ-ವಿವಾದಕ್ಕೆ ಕಾರಣವಾದ ಪ್ರಮುಖ ಪ್ರಶ್ನೆ—9 ತಿಂಗಳ ಕಾಲ ಬಾಲಕಿಯ ಗರ್ಭಧಾರಣೆ ವಸತಿನಿಲಯದ ಸಿಬ್ಬಂದಿಯ ಗಮನಕ್ಕೆ ಬಾರದೇ ಇರಲು ಹೇಗೆ ಸಾಧ್ಯ? ವಾರ್ಡನ್ಗಳ ನಿರ್ಲಕ್ಷ್ಯವೇ? ಅವರು ತಿಳಿದುಕೊಂಡೇ ಮೌನವಾಗಿದ್ದರೇ? ಹಾಸ್ಟೆಲ್ನಲ್ಲಿ ಮಕ್ಕಳ ಮೇಲ್ವಿಚಾರಣೆ ಎಲ್ಲಿ ತಪ್ಪಿತು?
ಈ ಪ್ರಶ್ನೆಗಳು ಪೋಷಕರನ್ನೂ, ಸ್ಥಳೀಯರನ್ನು ಕೂಡಾ ಕಳವಳಗೊಳಿಸಿವೆ.
ಪಾಲಕರ ಆಕ್ರೋಶ ತೀವ್ರ
ಪೋಷಕರು ಮತ್ತು ಗ್ರಾಮಸ್ಥರು ವಸತಿನಿಲಯದ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. “ಹೆಣ್ಣುಮಕ್ಕಳ ಸುರಕ್ಷತೆಗೆ ಇರುವ ಹಾಸ್ಟೆಲ್ನಲ್ಲೇ ಇಂಥ ಘಟನೆ ನಡೆದರೆ ಪೋಷಕರು ಯಾರನ್ನು ನಂಬಬೇಕು?”ವಸತಿನಿಲಯದಲ್ಲಿ ಜವಾಬ್ದಾರಿ ಮತ್ತು ನಿಯಮ ಪಾಲನೆ ಸಂಪೂರ್ಣ ಕುಸಿದಿರುವುದಕ್ಕೆ ಪೋಷಕರು ತೀವ್ರವಾಗಿ ಪ್ರಶ್ನೆ ಎತ್ತಿದ್ದಾರೆ.




