Kadalekai Parishe : ನಾಳೆಯಿಂದ ಬೆಂಗಳೂರಿನ ಐತಿಹಾಸಿಕ ಹಬ್ಬ ಕಡಲೆಕಾಯಿ ಪರಿಷೆ ಆರಂಭವಾಗುತ್ತಿದೆ. ಮೂರು ದಿನದ ಪರಿಷೆಯನ್ನು ಈ ಬಾರಿ ಐದು ದಿನ ನಡೆಸಲು ನಿರ್ಧರಿಸಲಾಗಿದೆ.

ರಾಜಧಾನಿ ಬೆಂಗಳೂರಿನ ಬಸವನಗುಡಿ ಪ್ರದೇಶದಲ್ಲಿ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆ (Kadalekai Parishe ) ನಾಳೆಯಿಂದ ಆರಂಭವಾಗುತ್ತಿದೆ. ಸಾಂಪ್ರದಾಯಿಕವಾಗಿ ಮೂರು ದಿನ ನಡೆಯುತ್ತಿದ್ದ ಪರಿಷೆಯನ್ನು ಈ ಬಾರಿ ಐದು ದಿನಗಳ ಕಾಲ ಆಚರಿಸಲು ನಿರ್ಧರಿಸಲಾಗಿದೆ. ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಈ ಪರಿಷೆ ಪ್ರತಿವರ್ಷ ಕಾರ್ತಿಕ ಮಾಸದ ಕೊನೆಯ ದಿನ ಆರಂಭವಾಗುತ್ತದೆ.
ಲಕ್ಷಾಂತರ ಜನರು ಬರುವ ನಿರೀಕ್ಷೆ
ಕಳೆದ ವರ್ಷ 5 ಲಕ್ಷಕ್ಕೂ ಹೆಚ್ಚು ಜನರು ಪರಿಷೆಯಲ್ಲಿ ಪಾಲ್ಗೊಂಡಿದ್ದರು. ಈ ವರ್ಷವೂ ಅದಕ್ಕಿಂತ ಹೆಚ್ಚಿನ ಜನಸಂದಣಿ ಕಾಣುವ ನಿರೀಕ್ಷೆಯಿದೆ. ನಾಳೆ ಬೆಳಿಗ್ಗೆ 10:30ಕ್ಕೆ ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮಾಡಲಾಗುತ್ತದೆ.
ಅಲ್ಲದೆ ಐದು ಎತ್ತುಗಳಿಗೆ ಕಡಲೆಕಾಯಿ ಗಿಡ ತಿನ್ನಿಸುವ ಮೂಲಕ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಗಿದ್ದು, ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಸ್ಥಳೀಯ ಶಾಸಕರು ಪರಿಷೆಯನ್ನು ಉದ್ಘಾಟಿಸಲಿದ್ದಾರೆ.
ಇದನ್ನು ಓದಿ : Gold Price Today : ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಇಳಿಕೆ
ಶುಲ್ಕ ರಹಿತ ಅಂಗಡಿಗಳು – ಪ್ಲಾಸ್ಟಿಕ್ ಮುಕ್ತ ಪರಿಷೆ
ಈ ಬಾರಿ ಅಂಗಡಿಗಳಿಗೆ ಶುಲ್ಕ ರಹಿತ ಅನುಮತಿ ನೀಡಲಾಗಿದ್ದು, ಸಾವಿರಾರು ಅಂಗಡಿಗಳು ಈಗಾಗಲೇ ಸಿದ್ಧಗೊಂಡಿವೆ. ಪರಿಷೆಯು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿರಲಿದ್ದು, ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.
ವಿಶೇಷ ಅಲಂಕಾರ – ಜಾತ್ರೆಯ ಸಿಂಗಾರ
- ದೊಡ್ಡ ಬಸವಣ್ಣನಿಗೆ ಹಾಸನಾಂಬೆ ಶೈಲಿಯ ಹೂವಿನ ಅಲಂಕಾರ
- ಮೈಸೂರು ದಸರೆಯನ್ನು ಹೋಲುವಂತೆ ಬಸವನಗುಡಿ ಸುತ್ತಮುತ್ತಲಿನ 9 ರಸ್ತೆಗಳಿಗೆ ದೀಪಾಲಂಕಾರ
- ಭಕ್ತರ ಹಾಗೂ ಪ್ರವಾಸಿಗರ ಮನಸೆಳೆಯುವ ಸಾಂಸ್ಕೃತಿಕ ಶೋಭೆ
ಭದ್ರತೆಗಾಗಿ 900 ಪೊಲೀಸ್ ಸಿಬ್ಬಂದಿ ನಿಯೋಜನೆ
ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ, ಪರಿಷೆ ಪ್ರದೇಶದಲ್ಲಿ 900ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಂಚಾರ ವ್ಯವಸ್ಥೆ, ಜನಸಂದಣಿ ನಿಯಂತ್ರಣ ಹಾಗೂ ಭದ್ರತೆಯನ್ನು ಕಠಿಣವಾಗಿ ಅನುಸರಿಸಲಾಗುತ್ತಿದೆ.
ಇದನ್ನು ನೋಡಿ : RTO ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ – ಖಾಸಗಿ ವಾಹನಗಳಿಗೆ ಬಿಸಿ ಮುಟ್ಟಿಸಿದ್ರು




