
BANGALORE: ಕರ್ನಾಟಕ ಸರ್ಕಾರದ ವಿವಿಧ ನೀತಿಗಳನ್ನು ಹಾಗೂ ದಸರಾ ಹಬ್ಬದ ಉತ್ಸವ ಸಂಬಂಧ ತೆಗೆದುಕೊಳ್ಳಲಾಗಿರುವ ಕ್ರಮಗಳನ್ನು ಟೀಕಿಸುತ್ತಾ, ವಿಪಕ್ಷ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿರುವ ಅವರು, “ಹಿಂದೂಗಳ ದೇವಸ್ಥಾನ, ಹಬ್ಬ, ಆಚರಣೆಗಳಿಗೆ ಅಡಚಣೆ ಉಂಟು ಮಾಡುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅದೆಂತಹ ವಿಕೃತ ಸಂತೋಷ ಸಿಗುತ್ತೋ ಗೊತ್ತಿಲ್ಲ”ಎಂದು ಕಿಡಿಕಾರಿದ್ದಾರೆ.
ಈ ಬಾರಿ ಮೈಸೂರು ದಸರಾ ಹಬ್ಬದ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಸರ್ಕಾರ ಆಯ್ಕೆ ಮಾಡಿದ್ದು, ಇದನ್ನು ಆರ್.ಅಶೋಕ್ ಅವರು ತೀವ್ರವಾಗಿ ವಿರೋಧಿಸಿದ್ದಾರೆ. ಅವರು ತಮ್ಮ ಟ್ವೀಟ್ನಲ್ಲಿ, ” ತಾಯಿ ಚಾಮುಂಡೇಶ್ವರಿ, ತಾಯಿ ಭುವನೇಶ್ವರಿ, ನಮ್ಮ ಸಂಸ್ಕೃತಿಯ ಪ್ರತೀಕವಾದ ಅರಿಷಿಣ-ಕುಂಕುಮದ ಮೇಲೆ ನಂಬಿಕೆ ಇಲ್ಲದ ಅನ್ಯಧರ್ಮೀಯರಿಂದ ದಸರಾ ಉದ್ಘಾಟನೆ ಮಾಡಿಸುವ ಹಠ ಸಾಧಿಸುತ್ತಿದ್ದಾರೆ” ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಲ್ದೇ ಈ ಬಾರಿ ದಸರಾ ಹಬ್ಬದ ಪ್ರಮುಖ ಕಾರ್ಯಕ್ರಮಗಳ ವೀಕ್ಷಣೆಗೆ ಪಾಸ್ ಹಾಗೂ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಉಚಿತವಾಗಿ ಕಾರ್ಯಕ್ರಮ ವೀಕ್ಷಿಸಲು ಬಯಸುವ ಸಾರ್ವಜನಿಕರಿಗೆ ನಿರಾಸೆ ಎದುರಾಗಿದ್ದು, “ದುಬಾರಿ ಪಾಸ್ ನೆಪದಲ್ಲಿ ಜನಸಾಮಾನ್ಯರಿಗೆ ದಸರಾ ವೀಕ್ಷಣೆ ಕಷ್ಟಸಾಧ್ಯವಾಗಿದೆ” ಎಂದು ವಿಪಕ್ಷಗಳು ಆರೋಪಿಸುತ್ತಿವೆ.
ಇನ್ನು ಸರ್ಕಾರ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ 14 ಪ್ರಮುಖ ಮುಜರಾಯಿ ದೇವಸ್ಥಾನಗಳಲ್ಲಿ ಸೇವಾ ಶುಲ್ಕ ಹೆಚ್ಚಿಸಿದ್ದು, ಇದರಿಂದ ಹಿಂದೂ ಭಕ್ತರಿಗೆ ಆರ್ಥಿಕ ಪೆಟ್ಟು ಬಿದ್ದಿದೆ ಎಂದು ಆರ್.ಅಶೋಕ್ ಅವರು ಹೇಳಿದ್ದಾರೆ. “ಹಿಂದೂಗಳೇಂದರೆ ಸಿದ್ದರಾಮಯ್ಯನವರಿಗೆ ಏಕೆ ಇಷ್ಟು ತಾತ್ಸಾರ? ಏಕೆ ಇಷ್ಟು ದ್ವೇಷ?” ಎಂಬ ನೇರ ಪ್ರಶ್ನೆಗಳನ್ನು ಅವರು ಎಸೆದಿದ್ದಾರೆ. ಅಷ್ಟೆ ಅಲ್ಲದೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧವೂ ವಾಗ್ದಾಳಿ ನಡೆಸಿರುವ ಅವರು, “ಅವರ ಸಂವಿಧಾನ ಪುಸ್ತಕದಲ್ಲಿ ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳಾ?“ ಎಂದು ಪ್ರಶ್ನಿಸಿದ್ದಾರೆ.




