
CHIKKABALLAPURA : ವೈದ್ಯರ ನಿರ್ಲಕ್ಷ್ಯಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಬಾಣಂತಿ ಸಾವನ್ನಪ್ಪಿದ್ದು, ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಅಲ್ಲದೇ ವೈದ್ಯರ ನಿರ್ಲಕ್ಷ್ಯದಿಂದಲೇ ತಾಯಿ ಸಾವನ್ನಪ್ಪಿರೋದು ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿ, ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ. ರಕ್ತದ ಮಾದರಿ ಪರೀಕ್ಷೆಯಲ್ಲಿ ವೈದ್ಯಕೀಯ ಸಿಬ್ಬಂದಿ ತೋರಿದ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಹೋಬಳಿಯ ಪುಲಗನಹಳ್ಳಿ ಗ್ರಾಮದ ಭಾಗ್ಯಮ್ಮ ಎಂಬುವವರು, ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ಹಾಗೂ ಮಗು ಆರೋಗ್ಯವಾಗಿಯೇ ಇದ್ದರು. ಆದರೆ ಸೋಮವಾರ ರಾತ್ರಿ ಇದ್ದಕ್ಕಿಂದ್ದಂತೆ ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಕೂಡಲೇ ತಾಯಿಯನ್ನು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಣಂತಿ ಭಾಗ್ಯಮ್ಮ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇನ್ನು ಬಾಣಂತಿ ಭಾಗ್ಯಮ್ಮ ಮಗುವಿಗೆ ಜನ್ಮ ನೀಡುವ ಮುನ್ನ ಬ್ಲಡ್ ಟೆಸ್ಟ್ ಮಾಡಿದ್ದಾಗ ಬಿ ಪಾಸಿಟಿವ್ ಎಂದು ಬಂದಿದೆ, ಆದರೆ ಅಪರೇಷನ್ ಬಳಿಕ ತೀವ್ರ ರಕ್ತ ಸ್ರಾವವಾಗಿ ಉಸಿರಾಟದ ತೊಂದರೆ, ಕೆಮ್ಮು ಹೆಚ್ಚಾದಾಗ ರಕ್ತದ ಅವಶ್ಯಕತೆ ಇತ್ತು. ಈ ವೇಳೆ ಮತ್ತೆ ಬ್ಲಡ್ ಚೆಕ್ ಮಾಡಿದಾಗ ಬಿ ನೆಗಟಿವ್ ಬಂದಿದೆ, ಅಲ್ಲದೇ ಕೂಡಲೇ ಬಾಣಂತಿ ಭಾಗ್ಯಮ್ಮಳನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಾಣಿವಿಲಾಸಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಣಂತಿ ಸಾವನ್ನಪ್ಪಿದ್ದಾರೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಗೌರಿಬಿದನೂರಿನ ತಾಯಿ- ಮಕ್ಕಳ ಆಸ್ಪತ್ರೆ ಮುಂದೆ ಜಮಾಯಿಸಿ ವೈದ್ಯರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು. ನಮಗೆ ಆದ ಅನ್ಯಾಯ ಯಾರಿಗೂ ಆಗಬಾರದು ಕೂಡಲೇ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ತೆರೆಯಬೇಕು ಎಂದು ಮೃತ ಬಾಣಂತಿಯ ಗಂಡ ಆಗ್ರಹಿಸಿದರು.
ಇನ್ನು ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿ ಸಂತೋಷ್ ಬಾಬು ಭೇಟಿ ನೀಡಿದ್ದರು. ವಾಣಿವಿಲಾಸ ಆಸ್ಪತ್ರೆಯಲ್ಲಿ ಮೂರು ಗಂಟೆಗೆ ಬಾಣಂತಿ ಸಾವಾಗಿದೆ ಎಂದು ತಿಳಿಸಿದರು, ಕೂಡಲೇ ಎನ್ ಎಲ್ ಸಿ ಮಾಡಿ ಕೇಸು ದಾಖಲಿಸಿದ್ದೇವೆ, ರಿಪೋರ್ಟ್ ಗಾಗಿ ಕಾಯುತ್ತಿದ್ದೇವೆ, ಮತ್ತು ಇರುವ ದಾಖಲೆಗಳನ್ನೆಲ್ಲ ಸೀಸ್ ಮಾಡಲಾಗಿದೆ. ಅಲ್ದೇ ಬಾಣಂತಿ ಸಾವಿನ ತನಿಖೆಗಾಗಿ ಸಮಿತಿ ರಚಿಸಿದ್ದೇವಿ ಎಂದು ತಿಳಿಸಿದರು.
ಒಟ್ಟಿನಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವನ್ನಪ್ಪಿದ್ದು, ಎರಡು ದಿನಗಳ ಮಗು ಈಗ ತಬ್ಬಲಿಯಾಗಿದೆ. ವೈದ್ಯರು ಬೇಜಾಬ್ದಾರಿಯಿಂದ ಕೆಲಸ ಮಾಡದೇ ತಾಯಿ-ಮಕ್ಕಳ ಪ್ರಾಣವನ್ನು ಉಳಿಸಬೇಕಿದೆ.




