
Cricketer Devadatt Padikkal : ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳು ಕಠಿಣ ಪೈಪೋಟಿಗೆ ಇಳಿದಿವೆ. ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಎ 532 ರನ್ ಗಳಿಸಿ ಬೃಹತ್ ಮೊತ್ತವನ್ನು ಕಲೆ ಹಾಕಿತು.
ಭಾರತ ಎ ತಂಡದ ಪರವಾಗಿ ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಧ್ರುವ್ ಜುರೆಲ್ ಶತಕ ಬಾರಿಸಿ ತಂಡವನ್ನು ಸಂಕಷ್ಟದಿಂದ ಪಾರುಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಪಡಿಕ್ಕಲ್, 198 ಎಸೆತಗಳಲ್ಲಿ 9 ಬೌಂಡರಿಗಳ ಸಹಿತ ಶತಕ ಪೂರೈಸಿ ಅಂತಿಮವಾಗಿ 281 ಎಸೆತಗಳಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ಗಳಿಂದ 150 ರನ್ ಗಳಿಸಿದರು.
ಜುರೆಲ್ ಮತ್ತು ಪಡಿಕ್ಕಲ್ ನಡುವಿನ 200 ಕ್ಕೂ ಹೆಚ್ಚು ರನ್ಗಳ ಜತೆಯಾಟ ಭಾರತ ಎ ತಂಡದ ಇನ್ನಿಂಗ್ಸ್ ನಿಲುವು ಸ್ಥಿರಗೊಳಿಸಲು ಸಹಾಯವಾಯಿತು. ಈ ಅವಧಿಯಲ್ಲಿ ಧ್ರುವ್ ಜುರೆಲ್ ಕೂಡ ಶತಕ ಬಾರಿಸಿ ತಮ್ಮ ಬ್ಯಾಟಿಂಗ್ ನೈಪುಣ್ಯವನ್ನು ಮೆರೆದರು.
ಐಪಿಎಲ್ 2025 ವೇಳೆ ಗಾಯಗೊಂಡು ಆರ್ಸಿಬಿ ತಂಡದಿಂದ ಹೊರಬಿದ್ದಿದ್ದ ಪಡಿಕ್ಕಲ್ ಮರುಬಂದ ಬಳಿಕ ದುಲೀಪ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಸೆಮಿಫೈನಲ್ನಲ್ಲಿ ಅರ್ಧಶತಕ ದಾಖಲಿಸಿದ ಪಡಿಕ್ಕಲ್ ಈಗ ಈ ಶತಕದ ಮೂಲಕ ಮತ್ತೆ ತಮ್ಮ ಫಾರ್ಮ್ನತ್ತ ವಾಪಸ್ಸಾಗಿದ್ದಾರೆ.
ಮಾರ್ಚ್ 2024ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪ್ರವೇಶ ಮಾಡಿದ ಪಡಿಕ್ಕಲ್, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಅವಕಾಶ ಪಡೆದಿದ್ದರು. ಈಗಾಗಲೇ ಮೂರು ಟೆಸ್ಟ್ ಇನ್ನಿಂಗ್ಸ್ಗಳಲ್ಲಿ ಅರ್ಧಶತಕ ಸೇರಿದಂತೆ 90 ರನ್ ಗಳಿಸಿರುವ ಈ ಯುವ ಬ್ಯಾಟ್ಸ್ಮನ್, ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಸ್ಥಾನ ಪಡೆಯುವ ಗುರಿ ಹೊಂದಿದ್ದಾರೆ.




