
MYSORE : ಮೈಸೂರು ಜಿಲ್ಲೆಯ ಹರವೆ ಗ್ರಾಮದಲ್ಲಿ, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಹುಣಸೂರಿನ ತೂಗು ಸೇತುವೆಯಿಂದ ಲಕ್ಷ್ಮಣತೀರ್ಥ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ದೀಪಿಕಾ, ನಂಜುಂಡಸ್ವಾಮಿ ಮತ್ತು ಅಂಬುಜ ದಂಪತಿಯ ಪುತ್ರಿ ದೀಪಿಕಾ ಎಂಬಾಕೆ ಮೃತ ದುರ್ದೈವಿಯಾಗಿದ್ದಾಳೆ.
ಮೈಸೂರಿನ ಜಯಲಕ್ಷ್ಮೀಪುರಂನ ವಿಶ್ವಕವಿ ಕುವೆಂಪು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು ಎನ್ನಲಾಗಿದೆ. ಆತ್ಮಹತ್ಯೆಗೂ ಮುನ್ನ ದೀಪಿಕಾ ಡೆತ್ ನೋಟ್ ಬರೆದಿದ್ದು, “ನನ್ನ ಸಾವಿಗೆ ನಾನೇ ಕಾರಣ” ಎಂಬ ವಿಷಯ ಉಲ್ಲೇಖಿಸಿದ್ದಾಳೆ. ಬಳಿಕ ಹುಣಸೂರಿನ ತೂಗು ಸೇತುವೆಯಿಂದ ಲಕ್ಷ್ಮಣತೀರ್ಥ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದೀಗ ಆಕೆಯ ಪೋಷಕರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಈ ದುಡುಕಿನ ನಿರ್ಧಾರವು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಘಟನೆಯ ಕುರಿತು ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣವನ್ನು ಪರಿಶೀಲನೆ ನಡೆಸುತ್ತಿದ್ದಾರೆ.




