
ಸಾಮಾನ್ಯವಾಗಿ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಿದ ಬಳಿಕ ಒಂದು ತಿಂಗಳೊಳಗೆ ರೀಫಂಡ್ ಹಣ ಖಾತೆಗೆ ಜಮೆಯಾಗುತ್ತದೆ. ಆದರೆ ಈ ವರ್ಷ ಅನೇಕರು ಆಗಸ್ಟ್ ತಿಂಗಳಲ್ಲೇ ಐಟಿಆರ್ ಸಲ್ಲಿಸಿದರೂ ಇನ್ನೂ ರೀಫಂಡ್ ಸಿಕ್ಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದರ ಮುಖ್ಯ ಕಾರಣ, ತೆರಿಗೆ ಇಲಾಖೆಯು ಈ ಬಾರಿ ಹೊಸ ವೆರಿಫಿಕೇಶನ್ ಪ್ರಕ್ರಿಯೆಯನ್ನು ಜಾರಿಗೆ ತಂದಿರುವುದಾಗಿದೆ.

ಸಣ್ಣ ಮೊತ್ತದ ರೀಫಂಡ್ಗಳಿಗೆ ಕೆಲವೇ ದಿನಗಳಲ್ಲಿ ಹಣ ಜಮೆಯಾಗುತ್ತಿದ್ದರೆ, ದೊಡ್ಡ ಮೊತ್ತದ ರೀಫಂಡ್ಗಳಿಗೆ ಕ್ಲೇಮ್ ಸಲ್ಲಿಸಿದವರಿಗೆ ತಪಾಸಣೆಯ ಪ್ರಕ್ರಿಯೆ ವಿಳಂಬವಾಗುತ್ತಿದೆ. ವಿಶೇಷವಾಗಿ ಕ್ಯಾಪಿಟಲ್ ಗೇನ್, ಬ್ಯುಸಿನೆಸ್ ಅಥವಾ ಇತರೆ ಮೂಲಗಳಿಂದ ಆದಾಯ ಹೊಂದಿರುವವರಿಗೆ ಇಲಾಖೆ ಹೆಚ್ಚು ನಿಗಾ ಇಟ್ಟು ಪರಿಶೀಲನೆ ನಡೆಸುತ್ತಿದೆ. ತೆರಿಗೆ ಬಾಧ್ಯತೆ ಮತ್ತು ಕ್ಲೇಮ್ ಮಾಡಿದ ರೀಫಂಡ್ ನಡುವೆ ವ್ಯತ್ಯಾಸ ಕಂಡುಬಂದರೆ, ತೆರಿಗೆ ಪಾವತಿದಾರರಿಂದ ಇಲಾಖೆಯು ಸ್ಪಷ್ಟನೆ ಕೋರಬಹುದು. ಇದರಿಂದ ರೀಫಂಡ್ಗೆ ಅನುಮೋದನೆ ಸಿಗಲು ಒಂದು ತಿಂಗಳಿಗಿಂತ ಹೆಚ್ಚು ಕಾಲ ಹಿಡಿಯಬಹುದು.

ಆದರೆ, ಪಾವತಿದಾರರು ಚಿಂತೆಪಡಬೇಕಿಲ್ಲ. ರೀಫಂಡ್ ಹಣ ವಿಳಂಬವಾದರೂ ಅದನ್ನು ಬಡ್ಡಿ ಸಮೇತವಾಗಿ ನೀಡಲಾಗುತ್ತದೆ. ಆದಾಯ ತೆರಿಗೆ ಇಲಾಖೆಯ ನಿಯಮ ಪ್ರಕಾರ, ರೀಫಂಡ್ ಹಣಕ್ಕೆ ವಾರ್ಷಿಕ ಶೇ.6ರ ಬಡ್ಡಿ ನೀಡಲಾಗುತ್ತದೆ. ಈ ಬಡ್ಡಿಯು ಪ್ರತಿವರ್ಷ ಏಪ್ರಿಲ್ 1ರಿಂದಲೇ ಲೆಕ್ಕಿಸಲಾಗುತ್ತದೆ. ಉದಾಹರಣೆಗೆ, ಅಕ್ಟೋಬರ್ನಲ್ಲಿ ರೀಫಂಡ್ ಬಂದರೆ ಆರು ತಿಂಗಳ ಬಡ್ಡಿ ಸೇರಿರುತ್ತದೆ, ನವೆಂಬರ್ನಲ್ಲಿ ಬಂದರೆ ಏಳು ತಿಂಗಳ ಬಡ್ಡಿ ಸೇರಿರುತ್ತದೆ. ಹೀಗಾಗಿ ಪಾವತಿದಾರರಿಗೆ ರೀಫಂಡ್ ವಿಳಂಬವಾದರೂ ಹಣದ ನಷ್ಟವಾಗುವುದಿಲ್ಲ, ಬಡ್ಡಿ ಲಾಭವೂ ದೊರೆಯುತ್ತದೆ.




