
CHAMARAJANAGARA : ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ, ಪ್ರತಿದಿನವೂ ಸಾವಿರಾರು ಭಕ್ತರು ಮಹದೇಶ್ವರ ಸ್ವಾಮಿಯ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಕೇವಲ ಕರ್ನಾಟಕವಲ್ಲದೇ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ಸಾಗರೋಪಾದಿಯಲ್ಲಿ ಬರುತ್ತಾರೆ.
ಇನ್ನು ಭಕ್ತರ ಸಂಖ್ಯೆಯಲ್ಲಿ ನಿರಂತರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ಅಮಾವಾಸ್ಯೆ, ಜಾತ್ರೆ ಮತ್ತು ರಜಾದಿನಗಳಲ್ಲಿ ದರ್ಶನಕ್ಕಾಗಿ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಕಾದು ಕೊಳ್ಳಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ಈ ಪರಿಸ್ಥಿತಿಯನ್ನು ನಿವಾರಿಸಲು ಮತ್ತು ದರ್ಶನ ವ್ಯವಸ್ಥೆಯನ್ನು ಸುಗಮಗೊಳಿಸಲು, ರಾಜ್ಯ ಸರ್ಕಾರದಿಂದ ತಿರುಪತಿ ಮಾದರಿಯ ‘ಕ್ಯೂ ಕಾಂಪ್ಲೆಕ್ಸ್’ ನಿರ್ಮಾಣ ಪ್ರಾರಂಭವಾಗಿದೆ.
ಈ ಕ್ಯೂ ಕಾಂಪ್ಲೆಕ್ಸ್ಗಳಲ್ಲಿ ಭಕ್ತರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಉಪಾಹಾರ ಕೇಂದ್ರಗಳು, ಮಕ್ಕಳಿಗಾಗಿ ಆರೈಕೆ ಕೇಂದ್ರ, ಸುಲಭ ಶೌಚಾಲಯ ಸೌಲಭ್ಯ ಸೇರಿದಂತೆ ಬಹು ಆಯಾಮದ ಸೌಲಭ್ಯಗಳು ಲಭ್ಯವಿರುವಂತೆ ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ಯೂ ಕಾಂಪ್ಲೆಕ್ಸ್ ನಿರ್ಮಾಣದ ಜೊತೆಗೆ, ಭಕ್ತರ ಅನುಕೂಲಕ್ಕಾಗಿ ಪಾರ್ಕಿಂಗ್, ಶೆಡ್ಗಳು, ದಾರಿ ಬದಲಾವಣೆ, ಹಾಗೂ ಆನ್ಲೈನ್ ಟೋಕನ್ ವ್ಯವಸ್ಥೆಯಂತಹ ಹಲವಾರು ಆಧುನಿಕ ಕ್ರಮಗಳನ್ನು ಅಂಗೀಕರಿಸುವ ಬಗ್ಗೆ ನಿರೀಕ್ಷೆ ಇದೆ.




