
BELAGVI NEWS : ಪಿಕ್ನಿಕ್ಗೆ (PicNic) ಒಂದೇ ಕುಟುಂಬದ ನಾಲ್ವರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನೆನ್ನೆ ಸಂಜೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಶಿರೋಡಾ-ವೇಲಗರ್ ಬೀಚ್ನಲ್ಲಿ (Shiroda-Velagar Beach) ನಡೆದಿದೆ. ಇನ್ನು ಮೂವರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.
ಈ ದುರ್ಘಟನೆ ನೆನ್ನೆ ಸಂಜೆ 4 ಗಂಟೆ ಸುಮಾರಿಗೆ ಸಂಭವಿಸಿದೆ. ಸಿಂಧುದುರ್ಗದ ಕುಡಾಲ್ ಮೂಲದ ಇಬ್ಬರು ಹಾಗೂ ಬೆಳಗಾವಿ ಮೂಲದ ಆರು ಮಂದಿ ಸೇರಿ ಎಂಟು ಸದಸ್ಯರ ಕುಟುಂಬವು ಅರೇಬಿಯನ್ ಸಮುದ್ರದ ತೀರದ ಶಿರೋಡಾ-ವೇಲಗರ್ ಬೀಚ್ಗೆ ಹೋಗಿದ್ದರು. ಎಂಟು ಮಂದಿಯೂ ಒಟ್ಟಿಗೆ ಈಜಲೆಂದು ಸಮುದ್ರಕ್ಕೆ ಇಳಿದಿದ್ದಾರೆ. ಸ್ವಲ್ಪ ಸಮಯದ ಬಳಿಕ ನೀರಿನ ಆಳದಲ್ಲಿ ಒಬ್ಬೊಬ್ಬರಾಗಿ ಮುಳುಗಲು ಪ್ರಾರಂಭಿಸಿದರು. ಇವರ ರಕ್ಷಣೆಗಾಗಿ ಯಾರೂ ಧಾವಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಮಾಹಿತಿ ತಿಳಿದ ತಕ್ಷಣ ಪೊಲೀಸರು ಮತ್ತು ಸ್ಥಳೀಯ ವಿಪತ್ತು ನಿರ್ವಹಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಸುಮಾರು ಹೊತ್ತು ಹುಡುಕಾಟ ದ ಬಳಿಕ ನಾಲ್ಕು ಶವಗಳನ್ನು ಹೊರತೆಗೆಯಲಾಯಿತು. ಆದರೆ ಇನ್ನೂ ಮೂವರು ನಾಪತ್ತೆಯಾಗಿದ್ದಾರೆ. 16 ವರ್ಷದ ಬಾಲಕಿಯೊಬ್ಬಳನ್ನು ರಕ್ಷಿಸಲಾಗಿದ್ದು, ಆಕೆಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎನ್ನಲಾಗಿದೆ. .




