
ಇತ್ತೀಚಿನ ದಿನಗಳಲ್ಲಿ ಅದ್ಯಾಕೋ ವೈದ್ಯರ ನಿರ್ಲಕ್ಷ್ಯ ದಿನೇ ದಿನೇ ಹೆಚ್ಚಾಗುತ್ತಿದೆ ಅನ್ನೋ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇತ್ತ ನಕಲಿ ವೈದ್ಯರಿದ್ದಾರೆ ಅನ್ನೋ ಎಚ್ಚರಿಕೆಯ ಸಂದೇಶಗಳು ಕೂಡ ಹರಿದಾಡುತ್ತಿವೆ. ಅತ್ತ ವೈದ್ಯರು ಮಾಡುವ ಸಣ್ಣ ಪುಟ್ಟ ಯಡವಟ್ಟಿನಿಂದಾಗಿ ಅನೇಕ ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಸಿಗುತ್ತವೆ. ಕೋಲಾರದಲ್ಲಿಯೂ ವೈದ್ಯರ ನಿರ್ಲಕ್ಷ್ಯದಿಂದ ಪುಟ್ಟ ಬಾಲಕಿಯೊಬ್ಬಳು ಬಲಿಯಾಗಿದ್ದು, ಇದಕ್ಕೆ ಕಾರಣ ವೈದ್ಯರೇ ಎಂದು ಪೋಷಕರು ಗಂಭೀರ ಆರೋಪವನ್ನು ಮಾಡುತ್ತಿದ್ದಾರೆ. ಮಗುವನ್ನು ಕಳೆದುಕೊಂಡ ಪೋಷಕರು ಅಕ್ಷರಶಃ ಕಂಗಾಲಾಗಿದ್ದಾರೆ. ಮನೆಯ ಮುಂದೆ ಪುಟ್ಟ ಮಗುವಿನ ಶವವನ್ನಿಟ್ಟು ರಕ್ತದ ಕಣ್ಣಿರನ್ನೆ ಸುರಿಸುತ್ತಿದ್ದಾರೆ. ಏನಾಯ್ತು ಮಗುಗೆ ಅಂತೀರಾ ಈ ಸ್ಟೋರಿ ನೋಡಿ.
ಹೌದು..ಹೀಗೆ ತಾನು ಹೆತ್ತು ಆಡಿಸಿ, ಬೆಳೆಸಿದ ಮಗುವಿನ ಸಾವನ್ನು ಕಂಡು ಕಣ್ಣೀರು ಹಾಕುತ್ತಿರೋ ತಾಯಿ. ಅತ್ತ ಬಾಳಿ ಬದುಕಬೇಕಾದ ಕಂದಮ್ಮ ಬಾರದ ಲೋಕಕ್ಕೆ ಹೋಗಿದ್ದಾಳೆ. ಊರಿಗೆ ಊರೇ ಬಂದು ಮಗುವಿನ ಸಾವನ್ನು ಕಂಡು ಮಮ್ಮಲ ಮರುಗುತ್ತಿದ್ದಾರೆ. ಇತ್ತ ತಂದೆ ಕಣ್ಣಿರಿಡುತ್ತ ತನ್ನ ಮಗಳ ಸಾವಿನ ಕಥೆ ಹೇಳಿಕೊಂಡು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಈ ದೃಶ್ಯ ಎಂತಹವರ ಮನಸಿಗೂ ನೋವು ತರದೆ ಇರದು. ಮೃತಪಟ್ಟಿರುವ ಬಾಲಕಿಯೆ ಹೆಸರು ತಾನ್ವಿ. ಮೃತ ಬಾಲಕಿ ತಾನ್ವಿಯನ್ನು ಬೆಂಗಳೂರು ಹೊಸಕೋಟೆ ತಾಲೂಕಿನ ನಾಗನಾಯಕನಕೋಟೆಯಲ್ಲಿ ವಾಸಿಸುವ ರಾಜೇಶ್ ಮತ್ತು ರೇಣುಕಾ ಅವರ ಪುತ್ರಿ. ದಂಪತಿಗಳಿಗೆ ಇಬ್ಬರು ಮಕ್ಕಳು ಒಂದು ಗಂಡು ಒಂದು ಹೆಣ್ಣು. ಅದರಲ್ಲಿ ದೊಡ್ಡವಳೆ ತಾನ್ವಿ. 8 ವರ್ಷದ ತಾನ್ವಿ ಆದಾಗಲೇ ಶಾಲೆಗೆ ಸೇರಿ ಓದುತ್ತಿದ್ದಳು. ತಂದೆ ತಾಯಿಗಳು ಹೇಗೋ ಕೂಲಿ ನಾಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದರು. ತಮ್ಮ ಮಕ್ಕಳಿಗೆ ಒಳ್ಳೆಯ ಭವಿಷ್ಯ ಕೊಡಬೇಕೆಂದುಕೊಂಡಿದ್ದ ಪೋಷಕರ ಕನಸಿಗೆ ಬೆಂಕಿ ಬಿದ್ದಂತಾಗಿದೆ.
ಇನ್ನು ಶಾಲೆಗೆ ರಜೆ ಇದ್ದ ಕಾರಣ ರಾಜೇಶ್ ದಂಪತಿ ತಮ್ಮ ಮಕ್ಕಳನ್ನು ತಮ್ಮ ಊರಾದ, ಮಾಸ್ತಿ ಹೋಬಳಿಯ ದೊಡ್ಡ ಇಗ್ಗಲೂರಿಗೆ ಕರೆದುಕೊಂಡು ಹೋಗಿದ್ದರಂತೆ. ಸೆಪ್ಟೆಂಬರ್ 29 ರಂದು ಪುಟ್ಟ ಕಂದಮ್ಮ ತಾನ್ವಿಗೆ ಜ್ವರ ಕಾಣಿಸಿಕೊಂಡಿತ್ತಂತೆ. ಇತ್ತ ತಂದೆ ತಾಯಿ ಮನೆಯಲ್ಲಿಯೇ ಜ್ವರದ ಸಿರಪ್ ಹಾಕಿದ್ರಂತೆ. ಆದ್ರೆ, ಜ್ವರ ವಾಸಿಯಾಗದ ಕಾರಣ ಸೆಪ್ಟೆಂಬರ್ 30 ರಂದು ಬೆಳಗ್ಗೆ ಮಾಲೂರಿನ ಸಂತೆಹಳ್ಳಿಯ ಗ್ರಾಮದಲ್ಲಿರುವ ಕ್ಲೀನಿಕ್ ಗೆ ಕರೆದುಕೊಂಡು ಹೋಗಿ ಡಾ.ಶಿವಕುಮಾರ್ ಅವರಿಗೆ ತೋರಿಸಿದ್ದಾರೆ. ಅತ್ತ ಡಾ.ಶಿವಕುಮಾರ್ ಮಗುವಿಗೆ ಇಂಜೆಕ್ಷನ್ ಕೊಟ್ಟು, ಮಾತ್ರೆ ನೀಡಿ ಕಳಿಯಿಸಿದ್ರಂತೆ. ಅದಾದ ಬಳಿಕ ಪೋಷಕರು ತಾನ್ವಿಯನ್ನು ಮನೆಗೆ ಕರೆದುಕೊಂಡು ಬರುತ್ತಾರೆ. ಈ ವೇಳೆ ತಾನ್ವಿಗೆ ಜ್ವರ ಕಡಿಮಯಾಗಿಲ್ಲ ಅನ್ನೋ ಕಾರಣಕ್ಕೆ ಅಕ್ಟೋಬರ್ 1 ಕ್ಕೆ ಮಾಲೂರಿನ ಅಂಜನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರಂತೆ. ಅಲ್ಲಿಯೂ ಚಿಕಿತ್ಸೆಯನ್ನು ಕೊಡಿಸಿಕೊಂಡು ಮನೆಗೆ ತೆರಳುತ್ತಾರೆ. ಆದ್ರೆ, ಆದಾದ ಬಳಿಕವೂ ತಾನ್ವಿಗೆ ಜ್ವರ ಕಡಿಮೆಯಾಗಿಲ್ಲವಂತೆ. ಆದ್ರೆ ಇಂಜೆಕ್ಷನ್ ನೀಡಿದ ಸ್ಥಳದಲ್ಲಿ ನೋವು ಕಡಿಮೆಯಾಗದ ಕಾರಣ, ಮಾಲೂರು ಟೌನ್ ನಲ್ಲಿರುವ ರಮೇಶ್ ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಕೊಡಿಸುತ್ತಾರೆ. ಅದಾದ ನಂತ್ರ ಮನೆಗೆ ತೆರಳಿದ್ರಂತೆ. ಇತ್ತ ಇಂಜೆಕ್ಷನ್ ಕೊಟ್ಟ ಸ್ಥಳದಲ್ಲಿ ಕಪ್ಪಾಗಿ, ಮಾರ್ಕ್ ಆಗಿ ಊತ ಬಂದಿತ್ತಂತೆ. ಇದೇ ಕಾರಣಕ್ಕೆ ಮತ್ತೆ ತಾನ್ವಿಯನ್ನು ಚಿಕಿತ್ಸೆಗೆ ಮತ್ತೆ ರಮೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರಂತೆ. ಅಲ್ಲಿನ ವೈದ್ಯರು ಇಲ್ಲಿ ಆಗಲ್ಲ ನೀವು ಕೋಲಾರ ಜಾಲಪ್ಪ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರಂತೆ. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾಗ, ಚಿಕಿತ್ಸೆ ಫಲಕಾರಿಯಾಗದೆ ತಾನ್ವಿ ಅಕ್ಟೋಬರ್ 2 ರಂದು ಸಾವನ್ನಪ್ಪಿದ್ದಾಳಂತೆ.
ಇತ್ತ ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಕೂಡ ದಾಖಲಾಗಿದೆ, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಆದ್ರೆ, ಮುದ್ದಾದ ಹೆಣ್ಣು ಮಗು ತಾನ್ವಿಯನ್ನು ಕಳೆದುಕೊಂಡ ಪೋಷಕರು ಮಾತ್ರ ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ. ತಾವು ಹೆತ್ತು ಹೊತ್ತು, ಆಡಿ ಬೆಳೆಸಿದ ಮಗು ತಮ್ಮ ಕಣ್ಣ ಮುಂದೆಯೇ ಈಗೆ ಸಾವನ್ನಪ್ಪಿರುವುದು ಹೆತ್ತರ ಕರುಳಿನ ಪ್ರಾಣ ಹಿಂಡುತ್ತಿದೆ. ತಮ್ಮ ಮಗುವಿನ ಸಾವು ಮತ್ತೆ ಯಾವ ಮಕ್ಕಳಿಗೂ ಬರಬಾರದು, ನಮ್ಮ ಮಗುವಿನ ಸಾವಿಗೆ ನ್ಯಾಯ ಸಿಗಬೇಕೆಂದು ಪೋಷಕರು ಮನವಿ ಮಾಡುತ್ತಿದ್ದಾರೆ.




