
ವಿಜಯದಶಮಿ ಅಂದರೆ ವಿಜಯದ ಹತ್ತನೇ ದಿನ. ಶಮಿ ಪೂಜೆಯೊಂದಿಗೆ ಆಚರಿಸಲಾಗುವ ಈ ಹಬ್ಬವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಪೌರಾಣಿಕ ಮಹತ್ವ ಹೊಂದಿದೆ. ಕೆಟ್ಟದ್ದರ ಮೇಲೆ ಒಳ್ಳೆಯದರ ಜಯ, ಅಧರ್ಮದ ಮೇಲೆ ಧರ್ಮದ ವಿಜಯ, ಕತ್ತಲೆಯ ಮೇಲೆ ಬೆಳಕಿನ ಗೆಲುವು ಈ ಹಬ್ಬದ ಮುಖ್ಯ ಸಂದೇಶ.
ಪೌರಾಣಿಕ ಹಿನ್ನೆಲೆ -ಮಾರ್ಕಂಡೇಯ ಪುರಾಣ ಪ್ರಕಾರ,
- ಶ್ರೀರಾಮಚಂದ್ರನು ರಾವಣನನ್ನು ಸೋಲಿಸಿ ಸೀತೆಯನ್ನು ರಕ್ಷಿಸಿದ ದಿನವೇ ವಿಜಯದಶಮಿ.
- ದೇವಿ ದುರ್ಗೆಯು ದುಷ್ಟ ಮಹಿಷಾಸುರನನ್ನು ಸಂಹರಿಸಿದ ದಿನವೂ ಇದೇ.
- ಪಾಂಡವರು ವನವಾಸದ ನಂತರ ಜಯ ಗಳಿಸಿದ ದಿನವೂ ವಿಜಯದಶಮಿಯೇ ಎಂದು ಪುರಾಣಗಳು ಹೇಳುತ್ತವೆ.
ಆಚರಣೆಗಳು – ಈ ದಿನ ಮನೆಗಳಲ್ಲಿ ದೇವರ ವಿಗ್ರಹಗಳಿಗೆ ಅಭಿಷೇಕ, ಅಲಂಕಾರ, ಪೂಜೆ ಮಾಡಲಾಗುತ್ತದೆ.
- ದುರ್ಗಾ ಸ್ತೋತ್ರ, ರಾಮ ಸ್ತೋತ್ರ, ದುರ್ಗಾ ಸಪ್ತಶತಿ ಪಠಣ ಶ್ರೇಷ್ಠ.
- ಸಿಹಿ ಪದಾರ್ಥಗಳು, ನಾನಾ ವಿಧ ಭಕ್ಷ್ಯಗಳನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ.
- ಕನಿಷ್ಠ ಮೂವರಿಗೆ ಅನ್ನದಾನ ಮಾಡುವುದು ಅಪಾರ ಪುಣ್ಯದಾಯಕ.
ಶಮಿ ಪೂಜೆಯ ಮಹತ್ವ-
ಪಾಂಡವರು ತಮ್ಮ ಅಸ್ತ್ರಗಳನ್ನು ಶಮಿ ವೃಕ್ಷದಲ್ಲಿ ಅಡಗಿಸಿ ವಿಜಯದ ನಂತರ ಅವುಗಳನ್ನು ಮರಳಿ ಪಡೆದರು ಎಂಬ ಕಥೆಯ ನೆನಪಿನಲ್ಲಿ ಈ ದಿನ ಶಮಿ ಪೂಜೆ ನಡೆಯುತ್ತದೆ.
ಶಮಿ ವೃಕ್ಷವನ್ನು “ಅಗ್ನಿಗರ್ಭ” ಎಂದೂ ಕರೆಯಲಾಗುತ್ತಿದ್ದು, ಶಮಿ ಪೂಜೆಯಿಂದ ಶನಿ ದೋಷ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಶಮಿ ಎಲೆಗಳನ್ನು ಪರ್ಸ್, ಪುಸ್ತಕ ಅಥವಾ ವಾಹನಗಳಲ್ಲಿ ಇಡುವುದು ಶುಭಕರ.
ವಿಶೇಷತೆಗಳು-
ಮೈಸೂರಿನಲ್ಲಿ ಇಂದು ಚಾಮುಂಡೇಶ್ವರಿಯ ಚಿನ್ನದ ಅಂಬಾರಿ ಮೆರವಣಿಗೆ ಅದ್ಧೂರಿಯಾಗಿ ಜರುಗಲಿದೆ.ಶಮಿ ಎಲೆಗಳನ್ನು ಕನಿಷ್ಠ ಐದು ಜನರೊಂದಿಗೆ ವಿನಿಮಯ ಮಾಡಿಕೊಳ್ಳುವುದು ಅತ್ಯಂತ ಶುಭಕರವೆಂದು ಶಾಸ್ತ್ರ ಹೇಳುತ್ತದೆ.
ಶುಭ ಮುಹೂರ್ತ:ಮಧ್ಯಾಹ್ನ 2.09ರಿಂದ 2.57ರವರೆಗೆ ವಿಶೇಷ ಪೂಜೆಗಾಗಿ 48 ನಿಮಿಷಗಳ ಅತ್ಯಂತ ಶುಭ ಕಾಲವಿದೆ.
ವಿಜಯದಶಮಿಯಂದು ದೇವರ ಆರಾಧನೆ ಮಾಡಿದರೆ, ವರ್ಷಪೂರ್ತಿ ಕಂಟಕಗಳು ದೂರವಾಗಿ, ಆರೋಗ್ಯ, ಆಯಸ್ಸು ಮತ್ತು ಸಮೃದ್ಧಿ ದೊರೆಯುತ್ತದೆ ಎಂದು ನಂಬಲಾಗಿದೆ.
🙏 ವಿಜಯದಶಮಿಯ ಹಾರ್ದಿಕ ಶುಭಾಶಯಗಳು




