
Shakti Yojane in Karnataka : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ ಯೋಜನೆ’ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪಡೆದಿದೆ. ಮಹಿಳಾ ಉಚಿತ ಸಂಚಾರ ಯೋಜನೆಗೆ International Book of Records ಮತ್ತು World Record of Excellence ಎಂಬ ವಿಶ್ವದಾಖಲೆಯ ಗೌರವ ಲಭಿಸಿದೆ. 500 ಕೋಟಿ ಉಚಿತ ಮಹಿಳಾ ಪ್ರಯಾಣಗಳ ಬೆನ್ನಲ್ಲೇ ಈ ಯಶಸ್ಸು ಬಂದಿದೆ.
2023ರ ಜೂನ್ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದ ಸರ್ಕಾರ ಆರಂಭಿಸಿದ್ದ ಶಕ್ತಿ ಯೋಜನೆಯಡಿ, KSRTC, BMTC, NWKRTC ಮತ್ತು KKRTC ನಿಗಮಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರ ನೀಡಲಾಗುತ್ತಿದ್ದು, ಇದುವರೆಗೆ 500 ಕೋಟಿಗೂ (500 Crore) ಅಧಿಕ ಉಚಿತ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ದಾಖಲೆ ನಿರ್ಮಿಸಿದೆ. ಈ ಸಾಧನೆ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಯೋಜನೆಯನ್ನು ಯಶಸ್ವಿಯಾಗಿ ಅಳವಡಿಸಿರುವ ನಾಲ್ಕು ನಿಗಮಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಾರ್ಮಿಕ ಮುಖಂಡರಿಗೆ ಧನ್ಯವಾದ ತಿಳಿಸಿದ್ದಾರೆ.
KSRTC ಈ ಮಾಹಿತಿಯನ್ನು ಅಧಿಕೃತ ಮಾಧ್ಯಮ ಪ್ರಕಟಣೆಯ ಮೂಲಕ ಹಂಚಿಕೊಂಡಿದ್ದು, ಶಕ್ತಿ ಯೋಜನೆ ಮಹಿಳಾ ಸಬಲೀಕರಣದ ದೃಷ್ಟಿಯಿಂದ ದೊಡ್ಡ ಹಂತದ ಯಶಸ್ಸು ಎಂದು ಅಭಿಪ್ರಾಯಪಟ್ಟಿದೆ.




