Unscientific blast in the name of Amruth Yojana in Chikkanayakanahalli

Rock Blast in chikkanayakanahalli : ಚಿಕ್ಕನಾಯಕನಹಳ್ಳಿ ಹೇಳಿಕೇಳಿ ಗುಡ್ಡಗಾಡಿನಿಂದ ತುಂಬಿರುವ ಹಾಗೂ ತುಮಕೂರಿನ ಮಲೆನಾಡು ಎಂದೇ ಖ್ಯಾತಿ ಗಳಿಸಿರುವ ತಾಲೂಕು. ಈ ತಾಲೂಕಿನಲ್ಲಿ ಗಣಿಗಾಗಿ ಭೂಮಿಯನ್ನು ಅಗೆದು ಹಾಳು ಮಾಡಿದ್ದಾರೆ ಅನ್ನೋ ಮಾತುಗಳಿವೆ. ಇಂತಹ ತಾಲೂಕಿನಲ್ಲಿ ಇಂದಿಗೂ ಅದೆಷ್ಟೋ ಗ್ರಾಮಗಳು ಗಣಿಭಾದಿತ ಗ್ರಾಮಗಳೆಂದೇ ಹಣೆಪಟ್ಟಿ ಕಟ್ಟಿಕೊಂಡಿವೆ. ಇದರ ಜೊತೆಗೆ ಕುಡಿಯು ನೀರಿಗಾಗಿ ನಡೆಯುತ್ತಿರುವ ಕಾಮಗಾರಿಯಿಂದಲೇ ಜನರು ಭಯಭೀತರಾಗಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯ ಯಗಚಿಹಳ್ಳಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ವತಿಯಿಂದ 5.00 ದಶಲಕ್ಷ ಲೀಟರ್ ಸಾಮರ್ಥ್ಯದ ಜಲಶುದ್ಧೀಕರಣ ಘಟಕ ನಿರ್ಮಿಸಲಾಗುತ್ತಿದೆ. ಈ ಅಮೃತ್ ಯೋಜನೆ ಕಾಮಗಾರಿಯನ್ನು ಇದೀಗ ಶುರು ಮಾಡಿದ್ದು, ಇದಕ್ಕೆ ನೆಲದಲ್ಲಿ ಸಿಗುವ ಬಂಡೆಗಳನ್ನು ಬ್ಲಾಸ್ಟ್ ಮಾಡುವ ಕೆಲಸಕ್ಕೆ ಅಲ್ಲಿನ ಕಾರ್ಮಿಕರು ಮುಂದಾಗಿದ್ದಾರೆ. ಆದರೆ, ಇಲ್ಲಿ ಸಮಸ್ಯೆ ಏನಪ್ಪ ಅಂದ್ರೆ ಅವೈಜ್ಞಾನಿಕವಾಗಿ ಬ್ಲಾಸ್ಟ್ ಮಾಡುತ್ತಿದ್ದು, ಅದು ಹಗಲು ವೇಳೆಯಲ್ಲಿಯೇ ಬ್ಲಾಸ್ಟ್ ಮಾಡುತ್ತಿದ್ದು, ಪಕ್ಕದಲ್ಲಿಯೇ ರಸ್ತೆ ಇದೆ. ಇಲ್ಲಿ ದಿನನಿತ್ಯ ಸಾವಿರಾರು ಜನ ವಾಹನ ಸವಾರರು ಸಂಚರಿಸುತ್ತಾರೆ. ಈ ವೇಳೆ ಬಂಡೆಗಳು ಸಿಡಿದು ಅವಘಡ ನಡೆದರೆ ಯಾರು ಹೊಣೆ..? ಇದನ್ನು ಪ್ರಶ್ನಿಸಲು ಹೋದವರ ಮೇಲೆ ಇಲ್ಲಿನ ಸಿಬ್ಬಂದಿಗಳು ಮುಗಿ ಬೀಳುತ್ತಿದ್ದಾರೆ ಎಂದು ಸಂಘಟನೆಗಳ ಮುಖಂಡರು ಗಂಭೀರವಾಗಿ ಆರೋಪಿಸುತ್ತಿದ್ದಾರೆ.
ಇನ್ನು ಇದೇ ವೇಳೆ ಜಯ ಕರ್ನಾಟಕ ಸಂಘಟನೆಯ ಮೋಹನ್ ಕುಮಾರ್ ರೈ ಹಾಗೂ ಗ್ರಾಹಕರ ವೇದಿಕೆಯ ಸತೀಶ್ ಕಾರ್ಗಿಲ್ ಅವರು ಮಾತನಾಡಿ, “ಬ್ಲಾಸ್ಟ್ ನಡೆಸಲು ಯಾವುದೇ ಪರ್ಮಿಷನ್ ಪಡೆಯದೆ, ಹಗಲಿನಲ್ಲೇ ಬಂಡೆಗಳನ್ನು ಬ್ಲಾಸ್ಟ್ ಮಾಡುತ್ತಿದ್ದಾರೆ. ಕೇಳಿದರೆ ಉಡಾಫೆ ಉತ್ತರ ನೀಡಿ, ವಿರೋಧಿಸಿದವರಿಗೆ ಧಮ್ಕಿ ಹಾಕುತ್ತಿದ್ದಾರೆ” ಎಂದು ಆರೋಪಿಸಿದರು.
ಇನ್ನು ಸ್ಥಳೀಯರ ಪ್ರಕಾರ ಬ್ಲಾಸ್ಟ್ಗಳ ಪರಿಣಾಮವಾಗಿ ಸುತ್ತಮುತ್ತಲಿನ ಮನೆಗಳಿಗೆ ಹಾನಿ ಉಂಟಾಗುವ ಭೀತಿ ಎದುರಾಗಿದೆಯಂತೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಅವೈಜ್ಞಾನಿಕವಾಗಿ ಕಾಮಗಾರಿಗಾಗಿ ಬಂಡೆಗಳನ್ನು ಬ್ಲಾಸ್ಟ್ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಅನಾಹುತ ಕಟ್ಟಿಟ್ಟಬುತ್ತಿಯಾಗಿದೆ.




