
Cinema ticket Price Controversy : ಚಲನಚಿತ್ರ ಟಿಕೆಟ್ ದರ ಏಕರೂಪಗೊಳಿಸಿ ₹200 ಗರಿಷ್ಠ ಮಿತಿ ನಿಗದಿಪಡಿಸಲು ರಾಜ್ಯ ಸರ್ಕಾರ (State Government) ಹೊರಡಿಸಿದ್ದ ಆದೇಶದ ಮೇಲೆ ಮೂಡಿದ ವಿವಾದ ದಿನದಿಂದ ದಿನಕ್ಕೆ ಗಂಭೀರ ರೂಪ ಪಡೆಯುತ್ತಿದ್ದು, ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ (High Court) ಮಹತ್ವದ ಸೂಚನೆ ನೀಡಿದೆ.
ಹೌದು..ಹೊಂಬಾಳೆ ಫಿಲ್ಮ್ಸ್ ಹಾಗೂ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ, ಹೈಕೋರ್ಟ್ ಇತ್ತೀಚೆಗೆ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಇದರಿಂದಾಗಿ ‘ಕಾಂತಾರ: ಚಾಪ್ಟರ್ 1’ ಸೇರಿದಂತೆ ಹಲವಾರು ಸಿನಿಮಾಗಳಿಗೆ ಟಿಕೆಟ್ ದರ ಹೆಚ್ಚಿಸಲು ಅವಕಾಶ ಲಭ್ಯವಾಯಿತು. ಇದೀಗ, ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ಈ ಮಧ್ಯಂತರ ತಡೆ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು, ಹೈಕೋರ್ಟ್ ಹೊಂಬಾಳೆ ಫಿಲ್ಮ್ಸ್(homabale Films) ಮತ್ತು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ಗೆ ನೋಟಿಸ್(notice) ಜಾರಿಗೊಳಿಸಿದೆ.
₹200 ದರ ಮಿತಿಗೆ ಜಿಎಸ್ಟಿ ಸೇರಿಸಿ ₹236 ವರೆಗೆ ಟಿಕೆಟ್ ಕಿಮ್ಮತ್ತು ವಸೂಲಿ ಮಾಡಬಹುದಾಗಿದೆ. ಈ ಮಿತಿಯನ್ನು ಮೀರಿ ಹಣ ವಸೂಲಿ ಮಾಡಿದರೆ, ಅದು ಕೋರ್ಟ್ ತೀರ್ಪಿಗೆ ಒಳಪಡುತ್ತದೆ. ಕೊನೆಗೆ ಸರ್ಕಾರದ ಪರ ತೀರ್ಪು ಬಂದರೆ, ಪ್ರೇಕ್ಷಕರಿಂದ ವಸೂಲಿಸಲಾದ ಹೆಚ್ಚುವರಿ ಹಣವನ್ನು ಮರಳಿಸಬೇಕಾಗುತ್ತದೆ. ಈ ಮಾಹಿತಿ ಚಿತ್ರಮಂದಿರಗಳಲ್ಲಿ (theaters) ಸ್ಪಷ್ಟವಾಗಿ ಪ್ರಕಟಿಸಲು ಹೈಕೋರ್ಟ್ ಆದೇಶ ನೀಡಿದೆ.
ಈ ಮಧ್ಯಂತರ ತೀರ್ಪು ಸಿನಿಮಾ ನಿರ್ಮಾಪಕರು, ಥಿಯೇಟರ್ ಮಾಲೀಕರು ಮತ್ತು ಪ್ರೇಕ್ಷಕರ ನಡುವೆ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಸರ್ಕಾರದ ಪರ ಎಎಜಿ ಇಸ್ಮಾಯಿಲ್ ಜಬೀವುಲ್ಲಾ ವಾದ ಮಂಡಿಸಿದ್ದಾರೆ. ‘ಸರ್ಕಾರದ ನಿಯಮ ಕಾನೂನುಬದ್ಧ ಆಗಿದೆ’ ಎಂದು ಕೋರ್ಟ್ಗೆ ಮನವರಿಕೆ ಮಾಡಿದ್ದಾರೆ. ವಾಣಿಜ್ಯ ಮಂಡಳಿ ಪರ ಹಿರಿಯ ವಕೀಲ ವಿ.ಲಕ್ಷ್ಮೀನಾರಾಯಣ ವಾದ ಮಾಡಿದ್ದಾರೆ. ‘ವಾಣಿಜ್ಯ ಮಂಡಳಿ ಮನವಿ ಮೇರೆಗೆ ಸರ್ಕಾರ ದರ ನಿಗದಿ ಮಾಡಿದೆ. ಹೀಗಾಗಿ ದರ (Price) ನಿಗದಿ ಆದೇಶಕ್ಕೆ ನೀಡಿದ ತಡೆಯಾಜ್ಞೆ ತೆರವು ಮಾಡಬೇಕು’ ಎಂದು ಅವರು ಕೋರಿದ್ದಾರೆ.




