
Belagavi Accident News : ಬೆಳಗಾವಿ ಜಿಲ್ಲೆಯ ಬೀಳಗಿ ತಾಲ್ಲೂಕಿನ ಅನಗವಾಡಿ ಬ್ರಿಡ್ಜ್ ಬಳಿ ನೆನ್ನೆ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದು, ಇನ್ನೂ ಮೂವರು ಗಾಯಗೊಂಡಿದ್ದಾರೆ.
ಮೃತರನ್ನು ಬೆಳಗಾವಿ ನಗರದ 45ನೇ ಸೆಕ್ಟರ್ ನಿವಾಸಿಗಳಾದ ಮಹೇಶ್ ನಾಯ್ಕರ್ (27) ಮತ್ತು ಮೆಹಬೂಬ್ ಶೇಖ್ (30) ಎಂದು ಗುರುತಿಸಲಾಗಿದೆ. ಗಾಯಗೊಂಡವರು ವಿಶಾಲ್ ವರತಿಲ್ಲೆ, ವಿಜಯಕುಮಾರ್ ಭೋವಿ ಮತ್ತು ಗುರುಪ್ರಸಾದ್ ಸುಂಕ ಎಂಬವರಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಂಟಂ ನಲ್ಲಿ ಬಾಗಲಕೋಟೆ ಕಡೆಗೆ ಬರುತ್ತಿದ್ದ ಬೆಳಗಾವಿ ನವನಗರದ 45 ಸೆಕ್ಟರ್ ನಿವಾಸಿ ಗಳಾದ ಈ ಐವರು ಊಟಕ್ಕೆಂದು ಸಮೀಪದ ವಿಜಯಪುರ ಜಿಲ್ಲೆಯ ಕೊಲ್ಹಾರಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ ಬರುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಗೆ ಇನ್ನೋವಾ ಕಾರು ಚಾಲಕನ ಅಜಾಗರೂಕ ಚಾಲನೆಯೇ ಕಾರಣ ಎಂದು ಹೇಳಲಾಗುತ್ತಿದ್ದು, ಮಹಿಂದ್ರಾ ಪಿಕಪ್ವೊಂದಕ್ಕೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಎದುರಿಗೆ ಬರುತ್ತಿದ್ದಟಂಟಂ ಗೆ ಇನ್ನೋವಾ ಕಾರು ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಇನ್ನು ಘಟನಾ ಸ್ಥಳಕ್ಕೆ ಕಲಾದಗಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರೆದಿದೆ.




