Vijay Rally Stampede :ತಮಿಳುನಾಡಿನ ಕರೂರಿನಲ್ಲಿ ನಟ ಹಾಗೂ ರಾಜಕಾರಣಿ ವಿಜಯ್ ದಳಪತಿ ಆಯೋಜಿಸಿದ್ದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ 39 ಮಂದಿ ದುರ್ಮರಣ ಹೊಂದಿದ್ದು, ಇನ್ನೂ 48 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಸಂತಾಪ ವ್ಯಕ್ತಪಡಿಸಿದ ವಿಜಯ್ ದಳಪತಿ, ಮೃತರ ಕುಟುಂಬಗಳ ಪ್ರತಿ ಮನೆಯವರಿಗೆ ತಲಾ ₹20 ಲಕ್ಷ ರೂ. ಪರಿಹಾರ ಮತ್ತು ಗಾಯಾಳುಗಳಿಗೆ ತಲಾ ₹2 ಲಕ್ಷ ರೂ. ನೆರವು ಘೋಷಿಸಿದ್ದಾರೆ.
ನನ್ನ ಹೃದಯದಲ್ಲಿ ನೆಲೆಸಿರುವ ಎಲ್ಲರಿಗೂ ನಮಸ್ಕಾರಗಳು. ಶನಿವಾರ ಕರೂರಿನಲ್ಲಿ ನಡೆದ ದುರಂತದಿಂದ ನನ್ನ ಹೃದಯ ಮತ್ತು ಮನಸ್ಸು ಭಾರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖಿಸುತ್ತಿರುವ ಕುಟುಂಬಗಳಿಗೆ ನನ್ನ ಸಂತಾಪ ವನ್ನು ಸೂಚಿಸುತ್ತಾ, ಈ ದುಃಖವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇದು ನಿಜಕ್ಕೂ ನಮಗೆ ತುಂಬಲಾರದ ನಷ್ಟ. ಘಟನೆಯಿಂದ ನನ್ನ ಹೃದಯ ಅನುಭವಿಸುತ್ತಿರುವ ನೋವನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ಯಾರೇ ಸಾಂತ್ವನದ ಮಾತುಗಳನ್ನು ಹೇಳಿದರೂ, ಪ್ರೀತಿಪಾತ್ರರನ್ನು ಕಳೆದುಕೊಂಡ ನೋವನ್ನು ಭರಿಸಲು ಸಾಧ್ಯವಿಲ್ಲ. ಆದರೂ, ನಿಮ್ಮ ಕುಟುಂಬದ ಸದಸ್ಯನಾಗಿ, ಪ್ರೀತಿಪಾತ್ರರನ್ನು ಕಳೆದುಕೊಂಡ ಪ್ರತಿ ಕುಟುಂಬಕ್ಕೆ 20 ಲಕ್ಷ ರೂ. ಮತ್ತು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ 2 ಲಕ್ಷ ರೂ. ನೀಡಲು ನಾನು ಉದ್ದೇಶಿಸಿದ್ದೇನೆ. ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಸಂದರ್ಭದಲ್ಲಿ ಈ ಮೊತ್ತವು ಗಮನಾರ್ಹವಾಗಿಲ್ಲ. ಆದರೂ, ಈ ಕ್ಷಣದಲ್ಲಿ, ನಿಮ್ಮ ಕುಟುಂಬಕ್ಕೆ ಸೇರಿದವನಾಗಿ, ನಿಮ್ಮೊಂದಿಗೆ ನಿಲ್ಲುವುದು ನನ್ನ ಕರ್ತವ್ಯ. ಅದೇ ರೀತಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ನಮ್ಮೆಲ್ಲರ ಪ್ರೀತಿಪಾತ್ರರು ಬೇಗನೆ ಚೇತರಿಸಿಕೊಂಡು ಮನೆಗೆ ಮರಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಲ್ಲದೇ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ನಮ್ಮ ಪ್ರೀತಿಪಾತ್ರರಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನಮ್ಮ ತಮಿಳಗ ವೆಟ್ರಿ ಕಳಗಂ ಪಕ್ಷ ನೀಡುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದಿದ್ದಾರೆ.