KOLAR : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಚೀಟಿಂವಾರಪಲ್ಲಿ ಗ್ರಾಮದಲ್ಲಿ ಕಿಡಿಗೇಡಿಗಳು ಮನೆಗೆ ಬೆಂಕಿ ಹಾಕಿದ ಘಟನೆ ನಡೆದಿದೆ. ಈ ದುಷ್ಕೃತ್ಯದಲ್ಲಿ ಸುಮಾರು ₹4 ಲಕ್ಷ ಮೌಲ್ಯದ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ಚೀಟಿಂವಾರಪಲ್ಲಿ ಗ್ರಾಮದ ರೈತ ಜಯರಾಮ್ ಅವರಿಗೆ ಸೇರಿದ ತೋಟದ ಮನೆಗೆ ಇಂದು ಬೆಳಗ್ಗೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ. ಜಯರಾಮ್ ಅವರು ತಮ್ಮ ಊರಿನಲ್ಲಿರುವ ಮನೆಗೆ ಮರುನಿರ್ಮಾಣ ಕಾರ್ಯ ಮಾಡಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಗೃಹಪಯೋಗಿ ವಸ್ತುಗಳನ್ನು ತಾತ್ಕಾಲಿಕವಾಗಿ ತೋಟದ ಮನೆಯಲ್ಲಿ ಇರಿಸಲಾಗಿತ್ತು. ಬೆಂಕಿಯಿಂದ ಮನೆಯಲ್ಲಿದ್ದ ರಸಗೊಬ್ಬರ, ಬಟ್ಟೆ, ಪಡಿಗೆ ಗೃಹೋಪಯೋಗಿ ಸಾಧನಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.
ಇನ್ನು ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಗೆ ಬೆಂಕಿಯಿಟ್ಟಿರುವ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಸಂಬಂಧ ರಾಯಲ್ಪಾ ಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.