KSRTC ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು 38 ತಿಂಗಳ ಹಿಂಬಾಕಿ ಮತ್ತು ವೇತನ ಪರಿಷ್ಕರಣೆ ಬೇಡಿಕೆಗಾಗಿ ಏಪ್ರಿಲ್ 8ರಿಂದ ಚಿತ್ರದುರ್ಗದಿಂದ ಬೆಂಗಳೂರುವರೆಗೆ ಪಾದಯಾತ್ರೆ ಆರಂಭಿಸುತ್ತಿದ್ದಾರೆ.

KSRTC : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ಸಾರಿಗೆ ನೌಕರರು ಮತ್ತೆ ಮುಷ್ಕರದ ಹಾದಿ ಹಿಡಿದಿದ್ದಾರೆ. ಸಾಲು ಸಾಲು ಸಂಧಾನ ಸಭೆಗಳು ವಿಫಲವಾದ ಹಿನ್ನೆಲೆ, ಸರ್ಕಾರದ ವಿರುದ್ಧ ಸಮರ ಸಾರಲು ನೌಕರರು ಸಜ್ಜಾಗಿದ್ದಾರೆ. ವಿಶೇಷವಾಗಿ 38 ತಿಂಗಳ ಹಿಂಬಾಕಿ ಹಣ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡಿದ್ದಾರೆ.

ಏಪ್ರಿಲ್ 8ರಿಂದ ಚಿತ್ರದುರ್ಗದಿಂದ ಬೆಂಗಳೂರುವರೆಗೆ ಪಾದಯಾತ್ರೆ
ಸಾರಿಗೆ ನೌಕರರು ಸರ್ಕಾರದ ಗಮನ ಸೆಳೆಯಲು ಏಪ್ರಿಲ್ 8ರಿಂದ ಚಿತ್ರದುರ್ಗದಿಂದ ಪಾದಯಾತ್ರೆ ಆರಂಭಿಸಲಿದ್ದಾರೆ. ಈ ಪಾದಯಾತ್ರೆ ಸುಮಾರು ಎರಡು ವಾರಗಳ ಕಾಲ ನಡೆಯಲಿದ್ದು, ಏಪ್ರಿಲ್ 21ರಂದು ಬೆಂಗಳೂರು ತಲುಪಲಿದೆ.
ಅದೇ ದಿನ, ನಗರದ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲು ಸಾರಿಗೆ ಮುಖಂಡರು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ತೀವ್ರಗೊಳ್ಳುವ ಸಾಧ್ಯತೆ ಇದೆ.

ಸರ್ಕಾರದ ವಿರುದ್ಧ ಆಕ್ರೋಶ: ಭರವಸೆ ಈಡೇರಿಸದ ಆರೋಪ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಈ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಚುನಾವಣೆಗೂ ಮುನ್ನ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂಬ ಆರೋಪವನ್ನು ನೌಕರರು ಮಾಡಿದ್ದಾರೆ.
ಇದರ ಜೊತೆಗೆ, ತಮ್ಮ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ, ನೌಕರರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳು
ಸಾರಿಗೆ ನೌಕರರು ಸರ್ಕಾರದ ಮುಂದೆ ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ:
- ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ಸರಿಸಮಾನ ವೇತನ ನೀಡಬೇಕು
- 2024ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಜಾರಿಗೆ ತರಬೇಕು
- 2020ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಪೂರ್ಣಗೊಳಿಸಬೇಕು
- 38 ತಿಂಗಳ ವೇತನ ಹಿಂಬಾಕಿ ಸಂಪೂರ್ಣವಾಗಿ ನೀಡಬೇಕು
- ಸಾರಿಗೆ ಸಂಸ್ಥೆಗಳಲ್ಲಿ ಸಂಘಗಳ ಮಾನ್ಯತೆಗಾಗಿ ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಬೇಕು

ಬಸ್ ಸಂಚಾರಕ್ಕೆ ಬ್ರೇಕ್ ಬೀಳುತ್ತದೆಯೇ?
ಪ್ರಸ್ತುತ, KSRTC ಸೇರಿದಂತೆ ಒಟ್ಟು 4 ನಿಗಮಗಳ ಸಾರಿಗೆ ನೌಕರರು ಪ್ರತಿಭಟನೆಗೆ ಭಾಗಿಯಾಗುವ ಸಾಧ್ಯತೆ ಇದೆ. ಆದರೆ, ಈ ಕ್ಷಣಕ್ಕೆ ಬಸ್ ಓಡಾಟ ಬಂದ್ ಮಾಡುವ ಕುರಿತು ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.
ಆದಾಗ್ಯೂ, ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಬಸ್ ಸಂಚಾರಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇರುವುದಾಗಿ ಸಾರಿಗೆ ನೌಕರರು ಎಚ್ಚರಿಕೆ ನೀಡಿದ್ದಾರೆ.




