ಸಿದ್ದಗಂಗಾ ಮಠದಲ್ಲಿ ಏಪ್ರಿಲ್ 1ರಂದು Shivakumara Swamiji ಶ್ರೀಗಳ 119ನೇ ಜನ್ಮದಿನೋತ್ಸವ ನಡೆಯಲಿದೆ…

ತ್ರಿವಿಧ ದಾಸೋಹಿ, ಶತಾಯುಷಿ ಸಿದ್ದಗಂಗಾ ಮಠದ ಶಿವೈಕ್ಯ ಶಿವಕುಮಾರ ಮಹಾಶಿವಯೋಗಿಗಳ 119ನೇ ಜನ್ಮದಿನೋತ್ಸವ ಇದೇ ಏಪ್ರಿಲ್ 1ರಂದು ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. Shivakumara Swamiji Jayanti ಕಾರ್ಯಕ್ರಮಕ್ಕೆ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುವುದು ವಿಶೇಷವಾಗಿದ್ದು, ಈ ಧಾರ್ಮಿಕ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.
ಜನಮಾನಸದಲ್ಲಿ “ನಡೆದಾಡುವ ದೇವರು” ಎಂದು ಹೆಸರಾದ ಶಿವಕುಮಾರ ಶ್ರೀಗಳ ಸೇವೆಯನ್ನು ಸ್ಮರಿಸುವುದಕ್ಕಾಗಿ ಈ ಕಾರ್ಯಕ್ರಮವನ್ನು ಭವ್ಯವಾಗಿ ಆಯೋಜಿಸಲಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ..
ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಳಗ್ಗೆ 10:30ಕ್ಕೆ ಸಿದ್ದಗಂಗಾ ಮಠಕ್ಕೆ ಆಗಮಿಸಲಿದ್ದಾರೆ.
ಮೊದಲು ಅವರು ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಆರತಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಮಠದಲ್ಲಿ ಶಿಕ್ಷಣ ಪಡೆಯುತ್ತಿರುವ ಸುಮಾರು 10 ಸಾವಿರ ವಿದ್ಯಾರ್ಥಿಗಳೊಂದಿಗೆ ಚುಟುಕಾಗಿ ಸಂವಾದ ನಡೆಸಲಿದ್ದಾರೆ.
ಅದರ ನಂತರ ಉದ್ದಾನಶ್ರೀ ವೇದಿಕೆಯಲ್ಲಿ ನಡೆಯುವ ಮುಖ್ಯ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಭಾಗವಹಿಸಲಿದ್ದಾರೆ.

ಭದ್ರತಾ ಕ್ರಮಗಳು ಕಟ್ಟು ನಿಟ್ಟಾಗಿ: ಭಕ್ತರಿಗೆ ವಿಶೇಷ ಸೂಚನೆ
ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಮಠದಲ್ಲಿ Z+ ಭದ್ರತೆ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಭಕ್ತಾದಿಗಳು ವೇದಿಕೆ ಕಾರ್ಯಕ್ರಮಕ್ಕೆ ನೀರಿನ ಬಾಟಲ್, ಕೊಡೆ (Umbrella) ,ತರುವುದನ್ನು ತಪ್ಪಿಸಬೇಕು ಎಂದು ಸಿದ್ದಲಿಂಗ ಸ್ವಾಮಿಗಳು ಮನವಿ ಮಾಡಿದ್ದಾರೆ.
ಭದ್ರತಾ ಕಾರಣಗಳಿಂದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ದಿನವನ್ನು ‘ದಾಸೋಹ ದಿನ’ವಾಗಿ ಘೋಷಿಸುವ ಬೇಡಿಕೆ
ಇದರ ನಡುವೆಯೇ, ಶಿವಕುಮಾರ ಶ್ರೀಗಳು ಲಿಂಗೈಕೈರಾದ ದಿನವನ್ನು ದಾಸೋಹ ದಿನವಾಗಿ ಅಧಿಕೃತವಾಗಿ ಘೋಷಿಸುವಂತೆ ಭಕ್ತಾದಿಗಳಿಂದ ಒತ್ತಾಯ ಕೇಳಿಬಂದಿದೆ.
ಈ ಸಂಬಂಧ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಅವರು, ಏಪ್ರಿಲ್ 1ರಂದು ನಡೆಯುವ ಜಯಂತ್ಯೋತ್ಸವದಂದೇ ದಾಸೋಹ ದಿನದ ಆಚರಣೆಗೆ ಅಧಿಕೃತ ಆದೇಶ ಹೊರಡಿಸುವಂತೆ ಮನವಿ ಮಾಡಿದ್ದಾರೆ.

ಹಿಂದಿನ ಸರ್ಕಾರದ ಘೋಷಣೆ ಇನ್ನೂ ಜಾರಿಗೆ ಬಂದಿಲ್ಲ
ಶಿವಕುಮಾರ ಮಹಾಶಿವಯೋಗಿಗಳು 2019ರ ಜನವರಿ 21ರಂದು ಲಿಂಗೈಕೈರಾಗಿದ್ದರು. ಆ ದಿನವನ್ನು ದಾಸೋಹ ದಿನ ಎಂದು ಆಚರಿಸಲಾಗುವುದು ಎಂದು ಅಂದಿನ ಬೊಮ್ಮಾಯಿ ಸರ್ಕಾರ ಘೋಷಣೆ ಮಾಡಿತ್ತು.
ಆದರೆ, ಈ ಘೋಷಣೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ, ಈ ಬಾರಿ ಅಧಿಕೃತ ಆದೇಶ ಹೊರಬರುವ ನಿರೀಕ್ಷೆ ಭಕ್ತರಲ್ಲಿ ಮೂಡಿದೆ.




